ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಆದ್ಯತೆ ನೀಡಿದ್ದು, ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಕಾಮಗಾರಿಗಳು ಹಾಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಿದ್ದಾರೆ.
ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಶಾಸಕರು, ವಿವಿಧ ಇಲಾಖೆಗಳ ಮುಖೇನ ತಾಲೂಕಿಗೆ 311.67 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇದಲ್ಲದೇ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ 38 ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಶೀಘ್ರದಲ್ಲೇ ಮಂಜೂರಾತಿ ದೊರೆಯಲಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಮಾಹಿತಿ ನೀಡಿದರು.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗಾಗಿ 40 ಕೋಟಿ ರೂ ನೀರಾವರಿ ಯೋಜನೆಗಳ ಅಭಿವೃದ್ಧಿಗಾಗಿ 146 ಕೋಟಿ ರೂ, ಸಣ್ಣ ನೀರಾವರಿ ಇಲಾಖೆಗೆ 13.85 ಕೋಟಿ ರೂ, ಅಲ್ಪಸಂಖ್ಯಾತರ ಕಾಲೋನಿಗಳಿಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 3 ಕೋಟಿ ರೂ., ಐಟಿಡಿಪಿ ಇಲಾಖೆಗೆ 4.80 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 23.20 ಕೋಟಿ ರೂ., ಗ್ರಾಮ ಪಂಚಾಯಿತಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 10 ಕೋಟಿ ರೂ., ಸೆಸ್ಕ್‌ನ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣಕ್ಕೆ 57.32 ಕೋಟಿ ರೂ., ಹಿಂದುಳಿದ ವರ್ಗಗಳ ಇಲಾಖೆಯ ಅರಸು ಭವನ ನಿರ್ಮಾಣದ ಮುಂದುವರೆದ ಕಾಮಗಾರಿಗೆ 2 ಕೋಟಿ ರೂ, ಹುಣಸೂರು ಸಾರ್ವಜನಿಕರ ಅಸ್ಪತ್ರೆಗೆ ಮುಂದುವರೆದ ಕಾಮಗಾರಿಗೆ 9.50 ಕೋಟಿ ರೂ.ಗಳನ್ನು ನೀಡಲಾಗಿದೆ. ಇದರ ಜೊತೆಗೆ ಬಸ್ ನಿಲ್ದಾಣಗಳು, ದೇವಾಲಯಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಸಮುದಾಯ ಭವನಗಳಿಗಾಗಿ 2 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.





