ಮೈಸೂರು : ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಪೊಲೀಸ್ ಮುಖ್ಯ ಪೇದೆಯನ್ನ ಅಮಾನತು ಮಾಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.
ನಗರದ ವಿವಿ.ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಿ.ಪ್ರದೀಪ್ ಎಂಬುವರು ಅಮಾನತು ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ವಾಕ್ಸಮರದ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋಗೆ ಹೆಡ್ ಕಾನ್‌ಸ್ಟೇಬಲ್ ಪ್ರಕಾಶ್ ಕಾಮೆಂಟ್ ಮಾಡಿದ್ದರು. ಅದರಲ್ಲಿ ಸಂಸದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಬಿ.ಪ್ರದೀಪ್, ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಸಂಸದ ಪ್ರತಾಪ ಸಿಂಹ ಹಾಕಲಾಗಿದ್ದ ಕಮೆಂಟ್ ಸ್ಕ್ರೀನ್ಶಾಟ್ ಜೊತೆ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದರು. ಇಲಾಖಾ ವಿಚಾರಣೆ ಬಾಕಿ ಇರಿಸಿ ಮುಖ್ಯ ಪೇದೆ ಬಿ.ಪ್ರದೀಪ್ ಅವರನ್ನ ಅಮಾನತು ಮಾಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.