Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಮೈಸೂರು ನಗರದಲ್ಲಿ ೨೭, ಜಿಲ್ಲಾ ವ್ಯಾಪ್ತಿಯಲ್ಲಿ ೩೦ ರೌಡಿಗಳ ಗಡಿಪಾರು: ಪೊಲೀಸ್ ಆಯುಕ್ತ ಬಿ. ರಮೇಶ್

ಮೈಸೂರು: ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಜತೆಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ತಡೆಯಲು ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕ್ರಿಟಿಕಲ್- ನಾನ್ ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈಗಾಗಲೇ ಮೈಸೂರು ನಗರದಲ್ಲಿ ೨೭ ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ೩೦ ರೌಡಿಗಳನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ.

ಜೊತೆಗೆ ರೌಡಿಶೀಟರ್‌ಗಳನ್ನು ಕರೆಯಿಸಿ ಎಚ್ಚರಿಕೆ ಕೊಡುವ ಜತೆಗೆ ಎಲ್ಲರ ಮೇಲೂ ನಿಗಾ ಇಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ನಗರ ವ್ಯಾಪ್ತಿಯಲ್ಲಿ ೯೭೧ ಮತಗಟ್ಟೆಗಳಿದ್ದು, ಇದರಲ್ಲಿ ಒಂದಕ್ಕಿಂತ ಹೆಚ್ಚು ಇರುವ ಕ್ಲಸ್ಟರ್ ಬೂತ್‌ಗಳಿಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಪಿಎಸ್‌ಐ, ಎಸ್‌ಐಗಳು, ಕೆಎಸ್‌ಆರ್‌ಪಿ, ಸಿಎಆರ್, ಪ್ಯಾರಾಮಿಲಿಟರಿ ಪಡೆ, ಕಮಾಂಡೋ ಪಡೆಯನ್ನು ನಿಯೋಜಿಸಲಾಗುವುದು ಎಂದರು.

ನಗರ ವ್ಯಾಪ್ತಿಯ ನಾಲ್ಕು ವಿಭಾಗಗಳಲ್ಲಿ ಎಸಿಪಿ ಉಸ್ತುವಾರಿ ಹೊಣೆ ಹೊತ್ತರೆ, ಡಿಸಿಪಿಗಳು ಮಾರ್ಗದರ್ಶನ ನೀಡಲಿದ್ದಾರೆ. ಇಡೀ ನಗರದ ಮೇಲೆ ಸಂಪೂರ್ಣ ಮೇಲುಸ್ತುವಾರಿ ನೋಡಿಕೊಳ್ಳಲಾಗುವುದು ಎಂದರು.

ಮೈಸೂರು ನಗರದ ಪೊಲೀಸ್ ಠಾಣಾವ್ಯಾಪ್ತಿಗಳಲ್ಲಿ ಪಥಸಂಚಲನ ನಡೆಸಿ ಮುಕ್ತವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತೆ ಹೇಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ೩೦ ರೌಡಿಗಳನ್ನು ಬೆಳಗಾವಿ, ಕಲಬುರ್ಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗೆ ಮೂರು ಪ್ಯಾರಾ ಮಿಲಿಟರಿ ತುಕಡಿ ಬಂದಿವೆ.  ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ವಿವಿಧ ಹಂತದ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗೆ ಒಬ್ಬರು ಪಿಸಿ, ಹೋಂಗಾರ್ಡ್, ಕ್ರಿಟಿಕಲ್ ಬೂತ್‌ಗೆ ಒಬ್ಬರು ಪಿಸಿ, ಎಚ್‌ಪಿಸಿ ನಿಯೋಜಿಸಲಾಗುವುದು. ಆಯಾಯ ಕ್ಲಸ್ಟರ್‌ನ ಅಧಿಕಾರಿಗಳು ಗಸ್ತು ಮಾಡಲಿದ್ದಾರೆ ಎಂದು ಹೇಳಿದರು.

Tags: