Mysore
24
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಒಳಮೀಸಲಾತಿ ಅನ್ಯಾಯ ಸರಿಪಡಿಸಲು ಆಗ್ರಹ

sc st protest

ಮೈಸೂರು : ಪರಿಶಿಷ್ಟ ಜಾತಿಯ ವೈಜ್ಞಾನಿಕ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ ವರದಿ ತಡೆಹಿಡಿದು, ತಕ್ಷಣವೇ ಉಪ-ಸಮಿತಿ ನೇಮಿಸಿ ಹೊಲೆಯ(ಬಲಗೈ) ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ಗಾಂಧಿನಗರ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೈಜ್ಞಾನಿಕ ವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡುವ ಬದಲು ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ಸೇರಿಸಿ ಕೊಂಡು ಅವೈಜ್ಞಾನಿಕವಾಗಿ ದೋಷಪೂರಿತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳನ್ನು ವರ್ಗೀಕರಣ ಮಾಡಲಾಗಿದೆ. ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ ಅಂಶಗಳನ್ನು ಒಳಗೊಂಡ ಕೆಲವು ಜಾತಿಗಳನ್ನು ಪ್ರವರ್ಗ-ಸಿನಲ್ಲಿ ಇರಿಸಿ ಇದೇ ಸಾಮಾಜಿಕ ಅಂಶಗಳನ್ನು ಒಳಗೊಂಡ ಹೊಲೆಯ ಸಂಬಂಧಿತ ಜಾತಿಗಳನ್ನು ಪ್ರವರ್ಗ-ಬಿ ಅಂದರೆ, ಮಾದಿಗ ಸಂಬಂಧಿತ ಜಾತಿಗಳ ಪೆಟ್ಟಿಗೆ ಸೇರಿಸಿ ಈ ಮೂಲಕ ಹೊಲೆಯ ಸಂಬಂಧಿತ ಜಾತಿಗಳ ಸಂಖ್ಯೆ ಯನ್ನು ಕಡಿಮೆ ಬರುವಂತೆ ಮಾಡಿ ಒಳ ಮೀಸಲಾತಿ ವರ್ಗಿಕರಣದ ಹೆಸರಿನಲ್ಲಿ ಅನ್ಯಾಯವೆಸಗಿದ್ದಾರೆ ಎಂದು ಕಿಡಿಕಾರಿದರು.

ಪ್ರವರ್ಗ-ಇ ಎಂಬ ವರ್ಗವನ್ನು ಮಾಡಿ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂಬ ಹೆಸರಿನ ಜಾತಿ ಸೂಚಕ ಗುಂಪುಗಳನ್ನು ಸೃಷ್ಟಿಸಿ ಈ ಮೂಲಕ ಹೊಲೆಯ ಸಮುದಾಯದಿಂದ ಆದಿ ಕರ್ನಾಟಕದಲ್ಲಿ ಗುರುತಿಸಿಕೊಂಡಿರುವ ಬಲಗೈ ಸಮುದಾಯವನ್ನು ಪ್ರತ್ಯೇಕಿಸಿ ಇಲ್ಲಿಯೂ ಹೊಲೆಯ(ಬಲಗೈ) ಸಮುದಾಯವನ್ನು ವಂಚಿಸಲಾಗುತ್ತಿದೆ. ವೈಜ್ಞಾನಿಕ ವರ್ಗೀಕರಣದ ಹೆಸರಿನಲ್ಲಿ ಹೊಲೆಯ ಸಂಬಂಧಿತ ಜಾತಿಗಳನ್ನು ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡಿರುವುದು ಸಾಮಾಜಿಕ ನ್ಯಾಯದ ಮೂಲತತ್ವಕ್ಕೆ ವಿರುದ್ಧವಾಗಿದೆ. ಪ್ರವರ್ಗ-ಎ ಅಡಿಯಲ್ಲಿ 51 ಜಾತಿಗಳನ್ನು ನಮೂದಿಸಿದ್ದು, ಹೊಲೆಯ ಸಂಬಂಧಿತ ಸಮುದಾಯದ ಜನಸಂಖ್ಯೆ ಕಡಿಮೆಯಾಗುವಂತೆ ಮಾಡಿ ಆ ಮೂಲಕ ಒಳ ಮೀಸಲಾತಿ ವೈಜ್ಞಾನಿಕ ವರ್ಗೀಕರಣದ ಹೆಸರಿನಲ್ಲಿ ಹೊಲೆಯ ಸಮುದಾಯವನ್ನು ವಂಚಿಸಿದ್ದಾರೆ ಎಂದು ದೂರಿದರು.

ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಮಾಜಿ ಮಹಾಪೌರ ಪುರುಷೋತ್ತಮ್, ಅಶೋಕಪುರಂ ಪೈ.ಕೃಷ್ಣ, ಸಿದ್ದಸ್ವಾಮಿ, ಎಂ.ವಿ.ಚಂದ್ರಶೇಖರ್, ವಿಷ್ಣುವರ್ಧನ, ಚೇತನ್, ಎ.ಆರ್.ಕಾಂತರಾಜ್, ಡಾ.ಮರಿದೇವಯ್ಯ, ಹರಿಹರ ಆನಂದಸ್ವಾಮಿ, ನಾಗವಾಲ ನರೇಂದ್ರ, ಚಂದ್ರಶೇಖರಯ್ಯ, ಸಿದ್ದಪ್ಪ, ಶಂಕರ್, ಭರತ್, ಪುಟ್ಟಯ್ಯ, ಅಶೋಕಪುರಂ ಮಹೇಶ್, ಹನಸೋಗೆ ನಾಗರಾಜು, ಕಿರಣ್, ಆನಂದ್, ನಂಜುಂಡಸ್ವಾಮಿ, ಶಿವಶಂಕರ್, ಗಂಗಾಧರ್, ಪ್ರಭು, ದಿಲೀಪ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!