ಮೈಸೂರು: ಕಿಡಿಗೇಡಿಗಳ ಮಚ್ಚಿನೇಟಿನಿಂದ ತೀವ್ರ ಗಾಯಗೊಂಡಿದ್ದ ಊರಬಸವ ಸಾವನ್ನಪ್ಪಿರುವ ಘಟನೆ ಮೈಸೂರು ತಾಲ್ಲೂಕಿನ ಅನಗಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 5 ತಿಂಗಳ ಹಿಂದೆ ಕಿಡಿಗೇಡಿಗಳು ದೇವರ ಬಸವನಿಗೆ ಮಚ್ಚಿನಲ್ಲಿ ತೀವ್ರ ಹಲ್ಲೆ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಬಸವನಿಗೆ ಕಳೆದ ಐದು ತಿಂಗಳಿಂದ ಗ್ರಾಮಸ್ಥರೇ ಚಿಕಿತ್ಸೆ ನೀಡಿ ಹಾರೈಕೆ ಮಾಡುತ್ತಿದ್ದರು. ಆದರೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಸವ ಇಂದು ಮುಂಜಾನೆ ಸಾವನ್ನಪ್ಪಿದೆ.
ಊರಿನ ಗ್ರಾಮದ ಜನರು ಇದನ್ನು ಊರಬಸವ ಎಂದೇ ಕರೆಯುತ್ತಿದ್ದರು. ಬಸವನ ಮೇಲೆ ಹಲ್ಲೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ಜರುಗಿ ಐದು ತಿಂಗಳಾದರೂ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಇನ್ನು ಮುಂಜಾನೆಯಿಂದಲೇ ಗ್ರಾಮಸ್ಥರು ಹಾಗೂ ಅಕ್ಕ-ಪಕ್ಕದ ಊರಿನ ಜನರು ಬಸವನ ಅಂತಿಮ ದರ್ಶನ ಪಡೆಯುತ್ತಿದ್ದು, ಊರಿನಲ್ಲಿ ಮೆರವಣಿಗೆ ನಡೆಸಿದ ಬಳಿಕ ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.
ಇನ್ನು ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ಬಸವನ ಸಮಾಧಿಯ ಮೇಲೆ ಗೋಪುರ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದು, ಹಲ್ಲೆ ಮಾಡಿದ್ದ ಕಿಡಿಗೇಡಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.





