Mysore
26
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಾ.24 ರಂದು ಸಚಿವ ಮಹದೇವಪ್ಪ ಮನೆಗೆ ದಸಂಸ ಮುತ್ತಿಗೆ ; ಇಲ್ಲಿದೆ ಕಾರಣ ?

ಮೈಸೂರು: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಒಳಗೆ ಭವನದ ಕಾಮಗಾರಿ ಪಾರಂಭಿಸಲಾಗುತ್ತದೆ ಎನ್ನುವ ದಲಿತರ ಕನಸನ್ನು ಭಗ್ನಗೊಳಿಸಿ ಹುಸಿ ಭರವಸೆಗಳನ್ನು ನೀಡುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪನವರ ನೈತಿಕತೆಯನ್ನು ಎಚ್ಚರಿಸಲು ಮಾ.೨೪ರಂದು ವಿಜಯನಗರದಲ್ಲಿರುವ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಹೇಳಿದ್ದಾರೆ.

ಮೈಸೂರಿನಲ್ಲಿ ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಲು ಇರುವ ತೊಡಕುಗಳನ್ನು ನಿವಾರಿಸಿ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಬದಲು ಬೇಜವಾಬ್ದಾರಿ ಹೇಳಿಕೆ ನೀಡಿ ಶೋಷಿತ ಸಮುದಾಯವನ್ನುಗೊಂದಲಕ್ಕೀಡು ಮಾಡುತ್ತಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ದಲಿತ ವಿರೋಧಿ ನಡೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ದಲಿತ ಸಂಘರ್ಷ ಸಮಿತಿ ಒತ್ತಾಯದಂತೆ ೨೮.೭.೨೦೧೦ ರಂದು ಸಮಾಜಕಲ್ಯಾಣ ಇಲಾಖೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನ ಹಸ್ತಾಂತರಿಸಿ ೧೫ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಪ್ರಾರಂಭಿಸಲು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರ ಮಹಾ ನಗರ ಪಾಲಿಕೆಗಳಿಂದ ಹಣ ಕ್ರೋಢಿಕರಿಸಿ ೧೪.೬೬ ಕೋಟಿ ರೂಪಾಯಿಗಳನ್ನು ಮೈಸೂರ ನಗರಾಭಿವೃದ್ಧಿ ಪ್ರಾಧಿಕಾರದ ಸುಪರ್ದಿಗೆ ನೀಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಶಂಕು ಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅಧಿಕಾರಿಗಳ ನಿರ್ಲಕ್ಷ ಮತ್ತು ದಲಿತ ವಿರೋಧಿ ಧೋರಣೆಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆದ ಪರಿಣಾಮ ಅಪೂರ್ಣಗೊಂಡು ೧೩ ವರ್ಷಗಳೇ ಕಳೆದಿದೆ. ಈವರೆಗೆ ಕೇವಲ ಶೇ. ೭೦ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಸರ್ಕಾರಗಳು ಬದಲಾಗಿವೆ ಮೈಸೂರಿನವರೇ ಆದ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ.ಡಾ.ಎಚ್.ಸಿ. ಮಹದೇವಪ್ಪನವರು ಎರಡು ಬಾರಿ ಜಿಲ್ಲಾಉಸ್ತುವಾರಿ ಸಚಿವರಾಗಿದ್ದಾರೆ. ಆದರೆ, ಮೈಸೂರು ಜಿಲ್ಲೆಯ ದುರ್ಬಲ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಶಕ್ತಿ ಕೇಂದ್ರವಾಗಬೇಕಿದ್ದ ಸಮುದಾಯ ಭವನ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ದುರಂತ ಎಂದಿದ್ದಾರೆ.

೧೩ ವರ್ಷಗಳ ಹಿಂದೆ ೧೫ ಕೋಟಿಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿಗೆ ಈಗ ೪೧ ಕೋಟಿ ಬೇಕಾಗಿದೆ. ಹೆಚ್ಚುವರಿ ೨೭ ಕೋಟಿ ಹಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿದೆ. ಕಾಮಗಾರಿ ಪ್ರಾರಂಭಿಸಲು ಸಚಿವ ಸಂಪುಟದ ಅನುಮೋದನೆ ಬೇಕು ಅಷ್ಟೇ ಎಂದು ಹೇಳುವ ಸಚಿವರು ಸಂಪುಟ ಸಭೆ ಅನುಮೋದನೆ ಪಡೆಯುವ ಪ್ರಯತ್ನ ಈವರೆವಿಗೂ ಈಡೇರದೆ ವಿಫಲವಾಗಿದೆ ಎನ್ನಬಹುದಾಗಿದೆ.

ದಲಿತ ವಿರೋಧಿ ಧೋರಣೆ ಖಂಡಿಸಿ ಟೌನ್‌ಹಾಲ್‌ನ ಬಾಬಾ ಸಾಹೇಬ್‌ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತ್ತು. ಮನವಿಯನ್ನು ಸ್ವೀಕರಿಸಲು ಬಾರದ ಉಸ್ತುವಾರಿ ಸಚಿವರು ಏಪ್ರಿಲ್ ೧೪ರ ಒಳಗೆ ಕಾಮಗಾರಿ ಪ್ರಾರಂಭಿಸಲು ಸಚಿವ ಸಂಪುಟದ ಒಪ್ಪಿಗೆ ಪಡೆಯುವುದಾಗಿ ಜಿಲ್ಲಾಧಿಕಾರಿಗಳ ಮೂಲಕ ಹೇಳಿಸಿದ್ದರು. ತಾವೂ ಕೂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ ಈವರೆವಿಗೂ ಕಾಮಗಾರಿ ಪ್ರಾರಂಭಿಸುವ ಯಾವುದೇ ಪ್ರಯತ್ನ ನಡೆದಿಲ್ಲದಿರುವುದು ದಲಿತ ಸಮುದಾಯವನ್ನು ಗೊಂದಲಕ್ಕೀಡು ಮಾಡಿದೆ. ಹಾಗಾಗಿ ಉಸ್ತುವಾರಿ ಸಚಿವರಾದ ಎಚ್.ಸಿ ಮಹದೇವಪ್ಪನವರ ಭರವಸೆ ಭರವಸೆಯಾಗಿಯೇ ಉಳಿದಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ದಲಿತ ಸಂಘರ್ಷ ಸಮಿತಿ ದಲಿತರೇ ಆದ ಸಚಿವರ ನೈತಿಕತೆಯನ್ನು ಎಚ್ಚರಿಸಲು ೨೪ರಂದು ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ನಂತರ ದಲಿತ ಸಂಘರ್ಷ ಸಮಿತಿಯ ಪ್ರತಿಭಟನೆಯನ್ನು ದಿಕ್ಕುತಪ್ಪಿಸಲು ಸಚಿವ ಸಂಪುಟದಿಂದ ಒಪ್ಪಿಗೆ ಪಡೆದ ಯಾವುದೇ ಆದೇಶ  ಅಧಿಕೃತವಾಗಿ ಬರದಿದ್ದರೂ ಒಪ್ಪಿಗೆ ಪಡೆದಿದ್ದೇನೆ ಎಂದು ಸಚಿವರೇ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಇದು ಸಮುದಾಯವನ್ನು ಗೊಂದಲಕ್ಕೀಡು ಮಾಡುವ ಹೇಳಿಕೆಯಾಗಿದೆ. ಅವರ ಹೇಳಿಕೆಯಲ್ಲಿ ಯಾವುದೇ ನೈಜತೆ ಇಲ್ಲಾ ಎಂಬುದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವಿಚಾರಿಸಿದಾಗ ತಿಳಿದು ಬಂದಿದೆ ಎಂದು ಕಿಡಿಕಾರಿದ್ದಾರೆ.

 

Tags:
error: Content is protected !!