ಮೈಸೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಅಂಡ್ ಗ್ಯಾಂಗ್ ಹತ್ಯೆ ಪ್ರಕರಣವನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಗ್ಯಾಂಗ್ ಕೃತ್ಯದ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ಸಿ.ಮಹದೇವಪ್ಪ ಅವರು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣವನ್ನು ಚರ್ಚೆ ಮಾಡಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗೇ ಆಗುತ್ತದೆ. ತಪ್ಪಿತಸ್ಥರಿಗೆಲ್ಲರಿಗೂ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸರು ಕೂಡ ಹೆಚ್ಚಿನ ನಿಗಾ ವಹಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಮಾಹಿತಿ ಹೊರಬರುತ್ತಿದೆ. ನಟ ದರ್ಶನ್ ಈ ರೀತಿ ಮಾಡಿದ್ದಾರೆ ಅಂದರೆ ಯಾರೂ ಕೂಡ ನಂಬಕ್ಕಾಗಲ್ಲ. ಈ ರೀತಿಯ ಘಟನೆಯಿಂದ ಇಡೀ ಚಿತ್ರರಂಗ ತಲೆತಗ್ಗಿಸುವಂತಾಗಿದೆ, ಕಾನೂನು ಎಲ್ಲರಿಗೂ ಒಂದೇ, ಹಾಗಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗೇ ಆಗುತ್ತೆ ಎಂದರು.




