ಮೈಸೂರು: ಕಾಂಗ್ರೆಸ್ ಸರ್ಕಾರ ಮೆಟ್ರೋ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿಸುವುದನ್ನು ಮೊದಲು ಬಿಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಕಿಡಿಕಾರಿದ್ದಾರೆ.
ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮಕ್ಕೆ ಇಂದು(ಫೆಬ್ರವರಿ.12) ಭೇಟಿ ನೀಡಿದ ಬಳಿಕ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮೆಟ್ರೋ ದರ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ವಿಶೇಷ ಒತ್ತಡ ಹಾಕುವುದು ರಾಜ್ಯ ಸರ್ಕಾರದ ಮೊದಲ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಮೆಟ್ರೋ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಹಾಗಾಗಿ ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರವೇ ಒತ್ತಡ ಹೇರಬೇಕು ಎಂದರು.
ರಾಜ್ಯ ಸರ್ಕಾರ ಮೆಟ್ರೋ ದರ ಇಳಿಕೆ ಮಾಡುವ ಸಲುವಾಗಿ ನಮ್ಮನ್ನು ಕರೆದರೆ ನಾವು ಕೇಂದ್ರದ ಬಳಿ ಸರ್ಕಾರದೊಂದಿಗೆ ಜೊತೆಯಾಗಿಯೇ ಹೋಗುತ್ತೇವೆ. ಆದರೆ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಒಂದು ಕೋಮಿನ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಸರಿಯಾಗಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಬರುತ್ತಿಲ್ಲ ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರ ತಲೆಯಲ್ಲಿ ಕೇವಲ ಮುಡಾ ಪ್ರಕರಣವೇ ತುಂಬಿದ್ದು, ಸಿದ್ದರಾಮಯ್ಯ ಹೆಸರಿನಲ್ಲಿ ಇರುವ ಸಿದ್ದ ಎಂಬುದನ್ನು ತೆಗೆಯಬೇಕಾದ ಸ್ಥಿತಿ ಬಂದಿದೆ. ಆ ಮಟ್ಟಕ್ಕೆ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದಾಗ ಬದಲಾಗಿದ್ದಾರೆ. ಆದರೆ ಪರಮೇಶ್ವರ್ ಅವರು ಕೇವಲ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ರಾಜಣ್ಣ, ಜಾರಕಿಹೊಳಿ, ಪರಮೇಶ್ವರ್ ಯಾರು ಮಂತ್ರಿ ಕೆಲಸ ಮಾಡುತ್ತಿಲ್ಲ. ಇವರೆಲ್ಲಾ ಕೇವಲ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಅವರ ಪಾಪ ಸ್ವಲ್ಪ ಪರಿಹಾರ ಆಗಿರಬಹುದು
ಪ್ರಯಾಗ್ ರಾಜ್‌ನ ಮಹಾಕುಂಭಮೇಳ ಮತ್ತು ಟಿ.ನರಸೀಪುರದ ಕುಂಭಮೇಳದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪುಣ್ಯಸ್ನಾನ ಮಾಡಿರುವುದರಿಂದ ಅವರ ಪಾಪ ಸ್ವಲ್ಪ ಪರಿಹಾರ ಆಗಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಬಣಗಳ ಜಿದ್ದಾಜಿದ್ದಿ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಈ ರೀತಿಯ ಪರಿಸ್ಥಿತಿ ಎದುರಾಗಬಾರದಿತ್ತು. ಆದರೆ ನಮ್ಮಲ್ಲಿ ಆಂತರಿಕ ಅವ್ಯವಸ್ಥೆ ಇದೆ. ಸದ್ಯ ನಮ್ಮ ಪಕ್ಷ ರಾಜ್ಯದಲ್ಲಿ ದಯಾನೀಯ ಸ್ಥಿತಿಯಲ್ಲಿದ್ದು, ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು ಎಂದರು.





