ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಎಳ್ಳು-ಬೆಲ್ಲ, ಹೂ-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.
ನಗರದ ದೇವರಾಜ ಮಾರುಕಟ್ಟೆಯ ಮಳಿಗೆಗಳು, ಡೊಡ್ಡ ಅಂಗಡಿ, ಚಿಕ್ಕ ಅಂಗಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಎಳ್ಳು,ಬೆಲ್ಲ,ಕಬ್ಬ ಮತ್ತು ಬೆಲ್ಲ ಸಹಿತ ಸಕ್ಕರೆ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತಿದೆ.
ಸ್ನೇಹಿತರು ಹಾಗೂ ಹಿತೈಷಿಗಳ ಮನೆಗಳಿಗೆ ತೆರಳಿ ಎಳ್ಳು,ಬೆಲ್ಲ, ಕಬ್ಬು ವಿನಿಮಯ ಮಾಡಿಕೊಳ್ಳಲು ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಬೆಲೆ ಏರಿಕೆ ಇದ್ದರೂ ಕುಗ್ಗದ ಖರೀದಿ ಭರಾಟೆ
ಇನ್ನೂ ಎಲ್ಲಾ ವಸ್ತುಗಳು ಬೆಲೆಗಳು ತುಸು ಹೆಚ್ಚಾಗಿದ್ದರೂ ಕೂಡ ಜನರಲ್ಲಿ ಹಬ್ಬದ ಉತ್ಸಾಹ ಮಾತ್ರ ಕುಗ್ಗಿಲ್ಲ. ಮಾರುಕಟ್ಟೆಗೆ ತೆರಳಿ ಚೌಕಸಿ ಮಾಡುವ ಮೂಲಕ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಸಂತಸದಿಂದಲೇ ಖರೀದಿಸುತ್ತಿದ್ದದ್ದು ಕಂಡುಬಂತು.
ಬಟ್ಟೆ, ಚಿನ್ನ ಖರೀದಿಯೂ ಜೋರು
ಚಿನ್ನದ ಬೆಲೆ ಗಗನಕ್ಕೇರಿದ್ದರೂ ವರ್ಷದ ಮೊದಲ ಹಬ್ಬಕ್ಕೆ ಚಿನ್ನ ಖರೀದಿಯೂ ಜೋರಿತ್ತು. ಇನ್ನೂ ಬಟ್ಟೆ ವ್ಯಾಪಾರವೂ ಚುರಕಾಗಿಯೇ ಇತ್ತು. ಸಯ್ಯಾಜಿರಾವ್ ರಸ್ತೆ, ಮನ್ನರ್ಸ್ ಮಾರುಕಟ್ಟೆ ಸೇರಿದಂತೆ ವಿವಿಧ ಶಾಪಿಂಗ್ ಕಾಂಪ್ಲೆಕ್ಸ್‌ಗಳು ತುಂಬಿ ತುಳುಕುತಿದ್ದವು.





