ಎಚ್.ಡಿ.ಕೋಟೆ : ತಾಲ್ಲೂಕಿನ ನಾಗರಹೊಳೆ ಮತ್ತು ವೀರನಹೊಸಳ್ಳಿ ಅರಣ್ಯ ವ್ಯಾಪ್ತಿಯ ಸೊಳ್ಳೇಪುರ ಗ್ರಾಮದ ರೈತ ಶೇಷ ಎಂಬವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ನಡೆದಿದೆ.
ಗ್ರಾಮದ ವ್ಯಾಪ್ತಿಯಲ್ಲಿ ಶಿವಕುಮಾರ್ ಎಂಬವರ ಜಮೀನು ಬಳಿ ಶೇಷ ಎಂಬವರ ಹಸು ಮೇಯುತ್ತಿದ್ದಾಗ ಕಾಡಿನಿಂದ ಬಂದ ಹುಲಿ ದಾಳಿ ನಡೆಸಿ ಕೊಂದುಹಾಕಿ, ಹಸುವಿನ ಕೆಲವೊಂದು ಭಾಗವನ್ನು ತಿಂದು ಕಾಡಿಗೆ ಹೋಗಿದೆ. ಇದನ್ನು ಗಮನಿಸಿದ ರೈತರು ಮತ್ತು ಸಾರ್ವಜನಿಕರು ಆತಂಕಗೊಂಡು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಆಗಾಗ್ಗೆ ಮನುಷ್ಯರ ಮೇಲೆ ಮತ್ತು ದನ- ಕರುಗಳು, ಮೇಕೆಯ ಮೇಲೆ ಕಾಡುಪ್ರಾಣಿಗಳು ಮತ್ತು ಹುಲಿಗಳು ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಸೂಕ್ತ ಪರಿಹಾರವನ್ನೂ ನೀಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ರೈತರ ಜತೆಗೂಡಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಈ ಭಾಗದ ಮುಖಂಡರಾದ ಶೇಷ, ಗಣೇಶ್ ನಾಯಕ್ ಮತ್ತು ಕೃಷ್ಣಪುರ ಪರಶಿವಮೂರ್ತಿ ಎಚ್ಚರಿಕೆ ನೀಡಿದ್ದಾರೆ.





