ನಂಜನಗೂಡು: ಕಂಟೇನರ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಂಜನಗೂಡು- ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ೭೬೬ರ ಸಿಂಧುವಳ್ಳಿಪುರದಲ್ಲಿ ನಡೆದಿದೆ.
ಕಾರಿನ ಚಾಲಕ ಅಸ್ಸಾಂ ಮೂಲದ ದಿನೇಶ ಸ್ಥಳದಲ್ಲೇ ಮೃತಪಟ್ಟವರು. ಕಾರಿನಲ್ಲಿದ್ದ ಮಂಡ್ಯ ನಗರಸಭೆ ಸದಸ್ಯ ಶಿವಪ್ರಕಾಶ್ ಅವರ ಪುತ್ರ ಚೆನ್ನೈನ ಐಆರ್‌ಎಸ್ ಕಂಪೆನಿಯ ಉದ್ಯೋಗಿ ತೇಜಸ್ ಕುಮಾರ್, ಈತನ ಸಹೋದರ ಕುಶಾಲ್, ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯದ ಈ ಕಾರು ಗುಂಡ್ಲುಪೇಟೆಯತ್ತ ತೆರಳುತ್ತಿದ್ದಾಗ ಸಿಂಧುವಳ್ಳಿಪುರದಲ್ಲಿ ಎದುರಿನಿಂದ ಅತಿ ವೇಗವಾಗಿ ಬಂದ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ನಂಜನಗೂಡು ಸಂಚಾರ ಠಾಣೆಯ ಅಧಿಕಾರಿಗಳಾದ ಸಿದ್ದರಾಜು ಹಾಗೂ ಮಾದೇಶ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.ಕಂಟೇನರ್ ಚಾಲಕ ಪರಾರಿಯಾಗಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.





