Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜನರ ದನಿಯಾಗಿರುವ ಸಂವಿಧಾನ: ಡಾ. ಪುಷ್ಪಅಮರ್ ನಾಥ್

ಮೈಸೂರು: ಬಡವರ, ದೀನದಲಿತರ, ಮಹಿಳೆಯರ ಹಾಗೂ ಸಮಾಜದಲ್ಲಿ ದನಿ ಇಲ್ಲದ ಜನರ ದನಿಯಾಗಿ ನಮ್ಮನ್ನು ಕಾಯುತ್ತಿರುವುದೇ ನಮ್ಮ ಸಂವಿಧಾನ ಎಂದು ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್ ಹೇಳಿದರು.

ಅವರು ಇಂದು(ನ.26) ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ಕಲಾ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ, “ಸಂವಿಧಾನ ದಿನ” ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ರಾಜ್ಯದಾದ್ಯಂತ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ನಾವು ಅದರಲ್ಲಿರುವ ಪ್ರತಿಯೊಂದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದು ಸಮಾನತೆಯ ಸಮಾಜವನ್ನು ನಿರ್ಮಿಸಲೆಂದು. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸಲು, ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿ ಬದುಕಲು, ಜನರಿಗೆ ನ್ಯಾಯ ಒದಗಿಸಲು ಸಂವಿಧಾನವು ಅತ್ಯವಶ್ಯಕ. ರಾಷ್ಟ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಹಲವಾರು ಧರ್ಮಗಳ ಆಚರಣೆ ಚಾಲ್ತಿಯಲ್ಲಿದೆ ಹಾಗೂ ಪ್ರತಿಯೊಂದು ಧರ್ಮವು ತಮ್ಮದೇ ಆದ ಧರ್ಮ ಗ್ರಂಥಗಳನ್ನು ಒಳಗೊಂಡಿವೆ. ಆದರೇ ಅದನ್ನೆಲ್ಲ ಮೀರಿದ ಎಲ್ಲಾ ಧರ್ಮದವರಿಗೂ ಅನ್ವಯಿಸುವ ದೈವ ಗ್ರಂಥ ರಾಷ್ಟ್ರೀಯ ಗ್ರಂಥವೇ ನಮಗೆ ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ. ಅದನ್ನು ಉಳಿಸಿ ರಕ್ಷಿಸುವುದು ಹಾಗೂ ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸಂವಿಧಾನದ ಆಶಾಯದಲ್ಲಿರುವ ಪ್ರಜಾಸತ್ತಾತ್ಮಕ, ಗಣರಾಜ್ಯ ದೇಶವನ್ನಿ ನಿರ್ಮಿಸಲು ಎಲ್ಲರೂ ಒಂದಾಗಿ ಸಮಾನತೆಯ ರಾಷ್ಟ್ರದ ನಿರ್ಮಾಣ ಮಾಡಬೇಕು. ಒಂದು ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯಬೇಕು ಎಂದರೆ ಮಹಿಳೆಯರು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಸಂವಿಧಾನದಲ್ಲಿರುವ ಮಹಿಳಾ ಮೀಸಲಾತಿಯನ್ನು ಉಪಯೋಗಿಸಿಕೊಂಡು ಪರಿಶ್ರಮದಿಂದ ಮಹಿಳೆಯರು ಹೆಚ್ಚಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕು. ಹಾಗೂ ಸಂವಿಧಾನವನ್ನು ಪ್ರತೋಯೊಬ್ಬರು ಒಪ್ಪಿ ಅಪ್ಪಿಕೊಳ್ಳಬೇಕು ಎಂದು ಹೇಳಿದರು.

ಇಂದು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ಸಂವಿಧಾನದ ಆಶಯಗಳನ್ನು ಒಳಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದೆ. ಈ ಯೋಜನೆಗಳ ದೂರದೃಷ್ಟಿ ಕೋನವನ್ನು ಅರಿತು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮನ್ನು ಸಾಕಿ ಸಲಹುತ್ತಿರುವ ಸಂವಿಧಾನವನ್ನು ಅದರ ಆಶಯಗಳನ್ನು ಸಂರಕ್ಷಿಸುವ ಹಾಗೂ ಜನರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಅದಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಹಿರಿಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ. ಡಿ ಆನಂದ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಅಹಿಂದ ಜವರಪ್ಪ, ಸೋಮಯ್ಯ ಮಲೆಯೂರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Tags: