ಮೈಸೂರು : ಪ್ರತಿಯೊಬ್ಬರೂ ಸ್ವತಂತ್ರವಾಗಿ ಜೀವಿಸುತ್ತಿರುವುದಕ್ಕೆ ನಮ್ಮ ಸಂವಿಧಾನ ಕಾರಣ. ಅಂತಹ ಮಹಾನ್ ಗ್ರಂಥ ಸಂವಿಧಾನವನ್ನು ಕೊಟ್ಟವರು ಡಾ. ಬಿ. ಆರ್ ಅಂಬೇಡ್ಕರ್ ಅವರು ಎಂದು ಚಾಮರಾಜ ವಿಧಾನ ಸಭೆಯ ಶಾಸಕರಾದ ಕೆ. ಹರೀಶ್ ಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ (ಏ.14) ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾನ್ ಮಾನವತಾವಾದಿ, ವಿಶ್ವಜ್ಞಾನಿ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಸಂವಿಧಾನ ಒಂದೇ ಅಲ್ಲದೇ ಅರ್ಥಶಾಸ್ತ್ರದಲ್ಲೂ ಪ್ರಸಿದ್ಧವಾದ ಮಹಾನ್ ವ್ಯಕ್ತಿ ಯಾಗಿದ್ದರು. ಜೊತೆಗೆ ಎಲ್ಲಾ ವಿಚಾರದಲ್ಲಿಯೂ ಪರಿಣಿತಿ ಹೊಂದಿದ್ದರು. ಅಂತಹ ಮಹಾನ್ ವ್ಯಕ್ತಿ ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ದಿನ ದಲಿತರು, ಹಿಂದುಳಿದವರು ಹಾಗೂ ಅಸ್ಪೃಶ್ಯರಿಗೆ ದೇಶದಲ್ಲಿ ಸಮಾನತೆ, ಸಹಬಾಳ್ವೆಯಿಂದ ಬದುಕಲು ಸಂವಿಧಾನವನ್ನು ಕೊಟ್ಟಿದ್ದಾರೆ ಅದನ್ನು ಯಾರೂ ಸಹ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಶಾಸಕ ಜಿ. ಟಿ. ದೇವೇಗೌಡ ಮಾತನಾಡಿ, ಸಂವಿಧಾನದ ಮೂಲಕ ಎಲ್ಲರ ಕಣ್ಣನ್ನು ತೆರೆಸಿದವರು ಡಾ. ಬಿ. ಆರ್ ಅಂಬೇಡ್ಕರ್. ಎಲ್ಲರಿಗೂ ಇರುವುದು ಒಂದೇ ಸಂವಿಧಾನ ಅದು ಬಾಬ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವಂತಹ ಸಂವಿಧಾನ ಅದರಂತೆ ನಾವು ಅಡಳಿತ ನಡೆಸಬೇಕು ಎಂದು ತಿಳಿಸಿದರು.
18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಒಂದು ಮತ ಎಂಬುದನ್ನು ನಮಗೆ ಕೊಟ್ಟಿದಾರೆ. ಅತ್ಯುತ್ತಮ ಸದಸ್ಯರನ್ನು ಆಯ್ಕೆ ಮಾಡುವಂತಹ ಹಕ್ಕನ್ನು ನಮಗೆ ನೀಡಿದವರು ಡಾ. ಬಿ.ಆರ್ ಅಂಬೇಡ್ಕರ್ ಅವರು ಎಂದು ತಿಳಿಸಿದರು.
ಡಾ. ಬಾಬ ಸಾಹೇಬ್ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ ಅವರು ಒಂದು ದೊಡ್ದ ಶಕ್ತಿ. ಶಿಕ್ಷಣ ಸಂಘಟನೆ ಅನ್ಯಾಯದ ವಿರುದ್ಧ ಹೋರಾಟ ಎಂಬ ಕರೆಯನ್ನು ನೀಡಿದ್ದಾರೆ. ಶಿಕ್ಷಣಕ್ಕೆ ಮೊದಲ ಅಧ್ಯತೆಯನ್ನು ನೀಡಿ ಕ್ರಾಂತಿಯನ್ನು ಮಾಡಿದವರು ಅಂಬೇಡ್ಕರ್ ಅವರು ಎಂದು ಹೇಳಿದರು.
ಭರತ ಖಂಡಕ್ಕೆ ಸಮಾನತೆಯನ್ನು ನೀಡಿದ್ದಾರೆ. ಬುದ್ಧ ಬಸವಣ್ಣ, ಗಾಂಧೀಜಿ ಇವರೆಲ್ಲರಿಗಿಂತ ಮೀರಿದ ಸಮಾನತೆ, ಸಾಮಾಜಿಕತೆ, ಆರ್ಥಿಕತೆಯನ್ನು ನೀಡಿದವರು ಡಾ. ಬಿ. ಆರ್ ಅಂಬೇಡ್ಕರ್ ಎಂದರು.
ಸಾಮಾಜಿಕ ನ್ಯಾಯದ ತೆರನ್ನು ಏಕಾಂಗಿಯಾಗಿ ಇಷ್ಟು ದೂರ ತಂದಿದ್ದೇನೆ ನಿಮ್ಮಲ್ಲಿ ನಂಬಿಕೆ ಇದ್ದರೆ ಮುಂದಕ್ಕೆ ಎಳೆಯಿರಿ ಇಲ್ಲದೆ ಹೋದರೆ ಹಿಂದಕ್ಕೆ ತಳ್ಳುವಂತಹ ಕೆಲಸ ಮಾಡಬೇಡಿ ಎಂಬ ಮಾತನ್ನು ನಮಗೆ ಹೇಳಿದ್ದಾರೆ ಅದನ್ನು ನಾವು ಅರಿಯಬೇಕು ಎಂದರು.
ವಿಧಾನ ಪರಿಷತ್ ನ ಶಾಸಕ ಡಾ ಡಿ. ತಿಮ್ಮಯ್ಯ ಮಾತನಾಡಿ. ಕತ್ತೆಲೆಯಲ್ಲಿ ಬದುಕುತ್ತಿದ್ದಂತಹ ಜನರಿಗೆ ಬೆಳಕು ನೀಡಿ, ಚೇತನದ ಶಕ್ತಿಯನ್ನು ನೀಡಿದವರು ಡಾ. ಬಿ.ಆರ್ ಅಂಬೇಡ್ಕರ್ ರವರು ಎಂದು ಹೇಳಿದರು
ಇಡೀ ಸಮಗ್ರ ಜನತೆಗೆ ಅವರು ಕೊಟ್ಟಿರುವಂತಹ ಸಂವಿಧಾನ ಮಾರ್ಗದರ್ಶನ ನಮಗೆ ದಾರಿ ದೀಪವಾಗಿದೆ ಅದನ್ನು ನಾವು ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಸಿ.ಎನ್.ಮಂಜೇಗೌಡ, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಎನ್.ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಶಿಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





