ಮೈಸೂರು: ರಾಜ್ಯ ಸರ್ಕಾರದ ಖಜಾನೆಯನ್ನು ಆಡಳಿತ ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಜನತೆಯ ಮೇಲೆ ಬರೆ ಬೀಳಲಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಸೋಮವಾರ (ಏ.೨೨) ಹೇಳಿದ್ದಾರೆ.
ಸಾಲಿಗ್ರಾಮದಲ್ಲಿನ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಅವರು, ಕಾಂಗ್ರೆಸ್ ಗ್ಯಾರೆಂಟಿಗಳಿಂದ ಮಹಿಳೆಯರು ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಒಳಗಾಗಲಿದ್ದಾರೆ. ಸರ್ಕಾರ ಈ ಎಲ್ಲಾ ಕಾರ್ಯಕ್ರಮಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡುತ್ತಿದೆ. ಆ ಮೂಲಕ ಗ್ಯಾರೆಂಟಿ ಹೆಸರನ್ನು ಬಳಸಿಕೊಂಡು ಜನರ ಮೇಲೆ ಸಾಲ ಹೊರಿಸಲಾಗುತ್ತಿದೆ ಎಂದು ದೂರಿದರು.
ಈ ಎಲ್ಲಾ ಸಾಲಗಳನ್ನು ತೀರಿಸಲು ಸರ್ಕಾರ ಎಲ್ಲಾ ಹೊರೆಗಳನ್ನು ತೆರಿಗೆಗಳ ಮೂಲಕ ಜನರ ಮೇಲೆ ಹಾಕಲಿದ್ದಾರೆ. ಆಡಳಿತ ಸರ್ಕಾರ ಮಾಡುತ್ತಿರುವ ಸಾಲವನ್ನು ಮುಂಬರುವ ಯಾವುದೇ ಸರ್ಕಾರಗಳು ತೀರಿಸಲು ಸಾಧ್ಯವಾಗದ ಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ ತಳ್ಳುತ್ತಿದೆ ಎಂದು ದೂರಿದರು.
ಈಗಾಗಲೇ ರಾಜ್ಯದ ಪ್ರತಿಯೊಬ್ಬರ ಮೇಲೆ 36 ಸಾವಿರ ಸಾಲವಿದೆ. ಇದು ಮುಂದಿನ ಐದು ವರ್ಷಗಳ ಕಾಲ ಎಷ್ಟಾಗಲಿದೆ ಎಂಬುದನ್ನು ಜನರು ಯೋಚಿಸಬೇಕು. ಈ ಬಾರಿ ಯೋಚಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಮಹಿಳೆಯರು, ಪ್ರಜೆಗಳು ಕಾಂಗ್ರೆಸ್ ಗ್ಯಾರೆಂಟಿಗಳಿಗೆ ಬಲಿಯಾಗಬಾರದು, ಬದಲಾಗಿ ಅಗತ್ಯವಾಗಿ ಬೇಕಿರುವ ಉಚಿತ ಶಿಕ್ಷಣ, ಉದ್ಯೋಗ, ಆರೋಗ್ಯ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕಲ್ಲಿ ಮುಂದಿನ ದಿನಗಳಲ್ಲಿ ಯಾರ ಮುಂದೆಯೂ ಕೈಯೊಡ್ಡಿ ನಿಲ್ಲುವ ಸ್ಥಿತಿಗೆ ತಲುಪಲಾರಿರಿ ಎಂದು ಎಚ್ಚರಿಸಿದರು.
ಇನ್ನು ಎನ್‌ಡಿಎ ಅಧಿಕಾರಕ್ಕೆ ಬಂದರೇ ರಾಜ್ಯ ಕೇಳುವ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಜೆಪಿ ಬೆಂಬಲ ನೀಡಲಿದೆ. ಪ್ರಧಾನಿ ಮೋದಿ ಅವರಿಗೆ ದೇವೆಗೌಡರನ್ನು ಕಂಡರೆ ಅಪಾರ ಗೌರವವಿದೆ ಎಂದು ತಿಳಿಸಿದರು.