Mysore
19
overcast clouds
Light
Dark

ಕಾಂಗ್ರೆಸ್ ಗ್ಯಾರಂಟಿ ಕಾರ್ಡನ್ನು ಮನೆ ಮನೆಗೆ ತಲುಪಿಸಲಾಗುವುದು : ಡಾ.ಪುಷ್ಪಾ ಅಮರನಾಥ್

ಮೈಸೂರು: ಬಡವರ ಬದುಕು ಹಸನುಗೊಳಿಸುವ, ಶ್ರಮಿಕರ ಕೂಲಿಯನ್ನು ಹೆಚ್ಚಿಸುವ, ಯುವಜನರಿಗೆ ಉದ್ಯೋಗ ಖಾತರಿ ನೀಡುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಮನೆ ಮನೆಗೆ ತಲುಪಿಸಲಾಗುವುದು. ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಜತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ನ್ಯಾಯಗಳೊಂದಿಗೆ ೨೫ ಕಾರ್ಯಕ್ರಮಗಳನ್ನು ಒಳಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಅನ್ನು ಪ್ರತಿಯೊಬ್ಬರಿಗೂ ತಲುಪಿಸುತ್ತೇವೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆಯ ನ್ಯಾಯವನ್ನು ಜಾರಿ ಮಾಡಲಿದ್ದೇವೆ.

ಯುವಜನರಿಗೆ ಉದ್ಯೋಗ ಖಾತರಿ, ಮಹಾಲಕ್ಷ್ಮೀ ಯೋಜನೆಯ ಮೂಲಕ ಕುಟುಂಬಕ್ಕೆ ೧ ಲಕ್ಷ ರೂ., ಎಂಎಸ್‌ಪಿ ಜಾರಿ, ಕೃಷಿಯಿಂದ ಜಿಎಸ್‌ಟಿ ತೆಗೆಯುವ ಶಪಥ ಮಾಡಿದ್ದೇವೆ. ದೇಶಾದ್ಯಂತ ಜಾತಿ ಗಣತಿ ನಡೆಸುತ್ತೇವೆ ಎಂದು ಹೇಳಿದರು.

೧೦ ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಕೊಟ್ಟ ಯಾವ ಗ್ಯಾರಂಟಿಯನ್ನೂ ಈಡೇರಿಸಿಲ್ಲ. ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡಿತೆ? ರೈತರ ಆದಾಯ ದ್ವಿಗುಣವಾಯಿತೇ? ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರೂ. ಹಣ ಬಂದಿದೆಯೆ? ಉಜ್ವಲ ಹೆಸರಿನಲ್ಲಿ ಮಹಿಳೆಯರಿಗೆ ಮೋಸ ಮಾಡಲಾಯಿತು. ಬಿಜೆಪಿಯವರದು ಬರೀ ಸುಳ್ಳಿನ ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್ ಮಾತನಾಡಿ, ಜಾ.ದಳದ ಅಸಲಿ ಮುಖ ಜನತೆಗೆ ಈಗ ಗೊತ್ತಾಗಿದೆ. ಯಾವುದೇ ಅಲ್ಪಸಂಖ್ಯಾತ ಮುಖಂಡರು ಬಿಜೆಪಿ-ಜಾ.ದಳ ಮೈತ್ರಿಯನ್ನು ಬೆಂಬಲಿಸುವುದಿಲ್ಲ. ಮೈತ್ರಿ ಬೆಂಬಲಿಸುವ ಮುಸ್ಲಿಮರಿಗೆ ಈಗ ತಿಳಿವಳಿಕೆ ಬರುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್‌ಕುಮಾರ್, ಮಾಜಿ ಮಹಾಪೌರರಾದ ಮೋದಾಮಣಿ, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮಾಜಿ ಉಪ ಮಹಾಪೌರರಾದ ಪುಷ್ಪವಲ್ಲಿ, ಕೈಸರ್ ಮತ್ತಿತರರು ಸುದ್ದಿಗೋಷ್ಠಿುಂಲ್ಲಿ ಹಾಜರಿದ್ದರು.