ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧೆಡೆ ದೇವಾಲಯಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಶ್ರೀ ಶ್ರೀ ಬ್ರಹ್ಮ ತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠ, ಶ್ರೀ ಲಕ್ಷ್ಮೀ ಹಯಗ್ರೀವ ದೇವರಿಗೆ ಪೂಜೆ, ಮಠದ ಹಿರಿಯ ಸ್ವಾಮೀಜಿಗಳಾದ ಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ನಂತರ ವಿಜಯನಗರ 1ನೇ ಹಂತದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಾದಿಗಳ ಬಳಿ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು.
ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಿಮ್ಮ ಹಾಗೆ ಇರುವಂತಹ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿದೆ. ಬಿಜೆಪಿ ತನ್ನ ಅಭ್ಯರ್ಥಿ ಬದಲಾವಣೆ ಮಾಡಿ ರಾಜ ಮನೆತನದ ದತ್ತು ಪುತ್ರನಿಗೆ ಅವಕಾಶ ಕೊಟ್ಟಿದ್ದಾರೆ.
ಆದರೆ ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಮಾಡಿಕೊಟ್ಟಿದೆ. ಸಿಎಂ ತವರು ಜಿಲ್ಲೆಯು ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಅದರಲ್ಲಿ ನಾವು ಗೆಲ್ಲಲೇ ಬೇಕು. ಹಿಂದೆ ಮನೆ ಮನೆಗೆ ಗ್ಯಾರಂಟಿ ಯೋಜನೆಯಂತೆ ಕೇಂದ್ರದಿಂದ ಮತ್ತೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಮಗೆ ಕೊಡಲು ನಮ್ಮ ಕಾಂಗ್ರೆಸ್ ಪಕ್ಷ ಮುಂದಾಗಿದೆ. ನಾವು ಮನೆಗೆ ಹೋಗಿ ದುಡ್ಡು ಹಂಚುವ ಕೆಲಸ ಮಾಡುವುದಿಲ್ಲ ಏಕೆಂದರೆ ಸಿದ್ದರಾಮಯ್ಯ ರವರ ಕೊಡುಗೆ ಅವರ ಅಭಿವೃದ್ದಿ ಕಾರ್ಯಕ್ರಮಗಳು ಮೈಸೂರಿಗೆ ಅಪಾರವಿದೆ ಎಂದು ಹೇಳಿದರು.
ಭಾರತ ದೇಶದಲ್ಲಿ ಎಲ್ಲರನ್ನೂ ಒಟ್ಟಾಗಿ ಸಮಾನತೆಯಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಿದ್ದರೆ ಅದು ನಮ್ಮ ಪಕ್ಷ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.