ಮೈಸೂರು : ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಗ್ಯಾರಂಟಿ ಯೋಜನೆಗಳ ಕುರಿತು ಸರ್ವೇ ನಡೆಸಬೇಕು. ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪ್ರಯೋಜನ, ಬದಲಾವಣೆ ಕುರಿತು ವಾಸ್ತವತೆಯ ಸರ್ವೇ ನಡೆಸಿದರೆ ನಿಜಾಂಶ ಗೊತ್ತಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಚಿತ ಗ್ಯಾರಂಟಿ ಯೋಜನೆಗಳನ್ನು ಕೊಡುವ ಸರ್ಕಾರಗಳನ್ನು ಸುಪ್ರೀಂಕೋರ್ಟ್ ಕಟು ಮಾತುಗಳಿಂದ ಟೀಕಿಸಿದೆ. ಜನರಿಗೆ ಉದ್ಯೋಗ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ತಪ್ಪಿಲ್ಲ. ಆದರೆ, ಚುನಾವಣೆಯಲ್ಲಿ ಗೆಲ್ಲಲು ಉಚಿತ ಕೊಡುಗೆಗಳನ್ನು ನೀಡಬಾರದು. ಶ್ರೀಮಂತ-ಬಡವರ ನಡುವಿನ ಅಂತರ ಕಡಿಮೆ ಮಾಡಲು ಕಾರ್ಯಕ್ರಮ ರೂಪಿಸುವ ಬದಲಿಗೆ ಯಾವುದೇ ಮಾನದಂಡವಿಲ್ಲದೆ ಕೊಡುಗೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ಯಾವುದೇ ಕೊಡುಗೆಗಳನ್ನು ನೀಡಬೇಕಾದರೆ ನಿರ್ದಿಷ್ಟ ಮಾನದಂಡಗಳು ಇರುತ್ತದೆ. ಪಿಂಚಣಿ ಪಡೆಯಲು ೬೫ ವರ್ಷ, ವಿಶೇಷಚೇತನರ ಪಿಂಚಣಿಗೆ ಶೇ.೭೦ರಷ್ಟು ದೈಹಿಕ ಅಂಗವಿಕಲತೆ ಇರಬೇಕು. ಅದೇ ರೀತಿ ಗ್ಯಾರಂಟಿಗಳಿಗೂ ಮಾನದಂಡ ಇಲ್ಲದೆ ಜನರ ತೆರಿಗೆಯ ದುಡ್ದನ್ನು ಪ್ರಚಾರಕ್ಕಾಗಿ, ಮತ ಗಳಿಸಲು ಕೊಡುವುದು ಸರೀನಾ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದರು.
ನಿಮಗೆ ನೀವೇ ಬೆನ್ನುತಟ್ಟಿಕೊಳ್ಳುವ ಕೆಲಸ
ರಾಜ್ಯದಲ್ಲಿ ನಾನೊಬ್ಬ ಆರ್ಥಿಕ ತಜ್ಞ. ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದೇನೆ. ಬೆಸ್ಟ್ ಹಣಕಾಸು ಮಂತ್ರಿ ಎನ್ನುವಂತೆ ನಿಮಗೆ ನೀವೇ ಬೆನ್ನು ತಟ್ಟಿಕೊಳ್ಳುವ ಕೆಲಸವನ್ನು ಬಿಡಬೇಕು. ಕರ್ನಾಟಕದ ಸಾಲವು ೭.೫೦ ಲಕ್ಷ ಕೋಟಿ ರೂ. ಇದ್ದು, ಸಿದ್ದರಾಮಯ್ಯ ಅವರೇ ೫ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಸಿಎಂಗೆ ನಾಡಿನ ಇತಿಹಾಸ, ಚರಿತ್ರೆ ಗೊತ್ತಿಲ್ಲ. ಸ್ವಲ್ಪ ಹಿಂದಿನ ಹಣಕಾಸು ಸಚಿವರ ಕಾಲವನ್ನು ನೋಡಬೇಕು ಎಂದು ಟಾಂಗ್ ನೀಡಿದರು.
ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಡುವುದು ಇರಲಿ,ನಿಮಗೆ ತನುಮನ-ಧನ ಎರೆದಿರುವ ಕುರುಬ ಸಮಾಜಕ್ಕೆ ಯಾವ ಕಾರ್ಯಕ್ರಮ ಮಾಡಿದ್ದೀರಾ? ರಾಜ್ಯದಲ್ಲಿ ೧೦ ಲಕ್ಷ ಅಲೆಮಾರಿ ಕುರುಬರಿದ್ದಾರೆ. ೧.೨೫ ಕೋಟಿ ಕುರಿಗಳನ್ನು ಮೇಯಿಸುತ್ತಿದ್ದಾರೆ. ಅವರಿಗಾದರೂ ಏನು ಮಾಡಿಲ್ಲ. ಈ ಬಜೆಟ್‌ನಲ್ಲಾದರೂ ಕಾರ್ಯಕ್ರಮ ಕೊಡುವರೇ ಎಂಬುದನ್ನು ನೋಡೋಣ ಎಂದು ಹೇಳಿದರು.
ಹೈಕಮಾಂಡ್ ಅಂದರೆ ಸಿದ್ದರಾಮಯ್ಯ ಆಗಿದ್ದಾರೆ. ಈಗಿನ ಹೈಕಮಾಂಡ್ ಬಲಹೀನವಾಗಿದೆ. ಕರ್ನಾಟಕದಲ್ಲಿ ಉಂಟಾಗಿರುವ ಇಂದಿನ ಬೆಳವಣಿಗೆಗೆ ಸಿದ್ದರಾಮಯ್ಯ ಕಾರಣ ಎಂದ ಅವರು, ಮನ್ರೇಗಾ ಯೋಜನೆ ಹೆಸರು ಬದಲಿಸಿ ವಿಬಿ ಜಿ-ರಾಮ್ ಜಿ ಹೆಸರು ಬದಲಾವಣೆ ಮಾಡಿರುವುದರಲ್ಲಿ ತಪ್ಪೇನಿಲ್ಲ. ಕಾಲಾನುಕಾಲಕ್ಕೆ ಬದಲಾವಣೆ, ಮಾರ್ಪಾಡು ಮಾಡಬೇಕು. ರಾಷ್ಟ್ರಪತಿಗಳು ಅಂಕಿತವಾಗಿರುವ ಕಾಯ್ದೆ ಜಾರಿಗೆ ತರಬೇಕು. ಒಂದು ವೇಳೆ ಈ ಯೋಜನೆ ಜಾರಿಗೆ ತರದಿದ್ದರೆ ಪರ್ಯಾಯ ಕಾರ್ಯಕ್ರಮ ಯಾವುದು ಎಂಬುದನ್ನು ಹೇಳಲಿ ಎಂದು ತಿಳಿಸಿದರು.





