ಮೈಸೂರು : ವೆನೆಜುವೆಲಾ ಅಧ್ಯಕ್ಷರ ಬಂಧನ ಖಂಡಿಸಿ, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ) ಮೈಸೂರು ಜಿಲ್ಲಾ ಸಮಿತಿಯಿಂದ ಭಾನುವಾರ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸರ‍್ಯ ಮಾತನಾಡಿ, ಬೊಲಿವೇರಿಯನ್ ರಿಪಬ್ಲಿಕ್ ಆಫ್ ವೆನೆಜುವೆಲಾದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಸರ್ಕಾರವು ನಡೆಸುತ್ತಿರುವ ಮಿಲಿಟರಿ ಆಕ್ರಮಣ ಮತ್ತು ಬಾಂಬ್ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಗಣರಾಜ್ಯದ ರಾಜಧಾನಿ ಕ್ಯಾರಕಾಸ್ ನಗರದ ನಾಗರಿಕ ಮತ್ತು ಮಿಲಿಟರಿ ಜಿಲ್ಲೆಗಳು ಮತ್ತು ಮಿರಾಂಡಾ, ಅರಾಗುವಾ ಮತ್ತು ಲಾ ಗುವೈರಾ ರಾಜ್ಯಗಳ ಮೇಲೆ ಸ್ಫೋಟಗಳು ಮತ್ತು ವೈಮಾನಿಕ ದಾಳಿ ನಡೆಸಿ ವೆನೆಜುವೆಲಾ ಅಧ್ಯಕ್ಷರ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಪಡೆಗಳು ಸೆರೆಹಿಡಿದು ದೇಶದಿಂದ ಹೊರಗೆ ಕರೆದೊಯ್ದ ಅಮೆರಿಕ ಅಧ್ಯಕ್ಷ ಟ್ರಂಪ್ ನಡೆಯನ್ನು ಖಂಡಿಸಿದರು.
ವೆನೆಜುವೆಲಾದ ನೆಲದ ಮೇಲೆ ಅಮೇರಿಕಾ ಮಿಲಿಟರಿ ದಾಳಿಯನ್ನು ನಡೆಸಿದೆ. ಕರಾವಳಿ ಬಂದರಿನ ಮೇಲೆ ಸಿಐಎ ನೇತೃತ್ವದ ಡ್ರೋನ್ ದಾಳಿಯೂ ಸೇರಿದೆ. ಅಮೇರಿಕಾ ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದ ಹೊರಬರಲು ಈ ದಾಳಿ ನಡೆಸಿದೆ. ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳು, ವ್ಯಾಪಕವಾದ ಅನಿಲ ಕ್ಷೇತ್ರಗಳು, ಗಮನಾರ್ಹ ಚಿನ್ನದ ಮೀಸಲು ಹೊಂದಿದೆ ಇದರ ಮೇಲೆ ತನ್ನ ಹಿಡಿತ ಸಾಧಿಸಲು ಸ್ವತಂತ್ರ ಸಾರ್ವಭೌಮ ದೇಶದ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.
ಅಮೆರಿಕ ಪರವಾಗಿ ಯಾವ ದೇಶ ಇರುವುದಿಲ್ಲವೋ ಅಂತಹ ದೇಶಗಳ ಮೇಲೆ ದಾಳಿಯನ್ನು ನಡೆಸುತ್ತಾ ಬರುತ್ತಿದೆ. ಅಮೇರಿಕಾದ ಈ ಸಾಮ್ರಾಜ್ಯಶಾಹಿ ನಡೆಯನ್ನು ಖಂಡಿಸಬೇಕಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯರಾದ ಎನ್.ವಿಜಯ್‌ಕುಮಾರ್, ಜಯರಾಂ, ಲೀಲಾವತಿ, ಸ್ಥಳೀಯ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ, ಸದಸ್ಯರಾದ ರಾಜೇಂದ್ರ, ಅಣ್ಣಪ್ಪ, ಬಸವಯ್ಯ, ಬಾಲಾಜಿ ರಾವ್, ಬಲರಾಮ್, ಪ್ರಭಾರಕ್, ರಾಮಚಂದ್ರ, ನಾಗಣ್ಣ, ಬೀರೇಗೌಡ, ಮಹದೇವ ಸ್ವಾಮಿ, ಬಸವರಾಜ್, ಹಿರೇಮಠ್ ಮುಂತಾದವರು ಇದ್ದರು.





