ಮೈಸೂರು : ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಸ್ಯಗಾರ(ಅಕ್ವೇರಿಯಂ) ನಿರ್ಮಾಣ ಮಾಡಲು ಯೋಜನಾ ವರದಿ ನೀಡಲು ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು.
ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿಸಲಾಯಿತು.