ಮೈಸೂರು: ನನ್ನ ಧ್ವನಿ ಅಡಗಿಸಲು ನನ್ನ ಮೇಲೆ ಸರ್ಕಾರ ದೂರು ದಾಖಲಿಸಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ದೂರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದಯಗಿರಿ ಗಲಭೆಗೆ ಪ್ರಚೋದನೆ ನೀಡಿದ ಮೌಲ್ವಿಯನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ಪುಂಡ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಂಡು ಪೊಲೀಸರ ಮೇಲೆ ಆಕ್ರಮಣ ಮಾಡಿದರು. ಈ ಘಟನೆ ಬೆನ್ನಲ್ಲೇ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆವು. ಧೈರ್ಯದಿಂದ ಇರಿ ಎಂದು ಮಾತನಾಡಿದೆವು. ಇದು ಪ್ರಚೋದನಕಾರಿ ವಿಚಾರವೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಹಲವು ಎಫ್‌ಐಆರ್ ದಾಖಲಿಸಿದೆ. ವಿಧಾನಸಭಾ ಚುನಾವಣೆಯ ವೇಳೆ ವರುಣದಲ್ಲಿ ೨, ಶಿಗ್ಗಾಂವಿ, ದಾವಣಗೆರೆ, ಬೆಂಗಳೂರಿನ ಬಸವೇಶ್ವರ ನಗರ, ಮಾಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು. ಈಗ ಉದಯಗಿರಿ ಪ್ರಕರಣದೊಂದಿಗೆ ಸಾಲು ಸಾಲು ಎಫ್‌ಐಆರ್ ಹಾಕಿ ಆತ್ಮಸ್ಥೈರ್ಯ ಕುಗ್ಗಿಸಿ ಮನೆಯಿಂದ ಹೊರಬರಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಸ್ಲಿಮರು ತಮ್ಮ ಮಕ್ಕಳನ್ನು ದೇವರು ಕೊಟ್ಟಿದ್ದು ಎನ್ನುತ್ತಾರೆ. ಹಾಗಾದರೆ ನಿಮ್ಮ ಮಕ್ಕಳನ್ನು ದೇವರೇ ನೋಡಿಕೊಳ್ಳಲಿ. ಸರ್ಕಾರ ಏಕೆ ನೋಡಿಕೊಳ್ಳಬೇಕು? ಅತಿ ಹೆಚ್ಚು ತೆರಿಗೆ ಕಟ್ಟುವವರು ಹಿಂದೂಗಳು. ಆದರೆ ಸೌಲಭ್ಯ ಮುಸ್ಲಿಮರಿಗೆ ಸಿಗುತ್ತಿದೆ. ಈ ಸತ್ಯ ಹೇಳಿದರೆ ಪ್ರಚೋದನೆ ಹೇಗಾಗುತ್ತದೆ? ನನ್ನ ಧ್ವನಿ ಅಡಗಿಸಬೇಕು ಎಂಬ ವ್ಯವಸ್ಥಿತ ಪ್ರಯತ್ನ ಕಳೆದ ೧೦ ವರ್ಷದಿಂದಲೂ ನಡೆದಿದೆ. ಆದರೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಿರಂತರ ಧ್ವನಿ ಎತ್ತುವೆ ಎಂದು ಹೇಳಿದರು.





