ನಂಜನಗೂಡು: ಮೈಸೂರು ಸಾಂಸ್ಕೃತಿಕ ನಗರವಾದರೆ, ನಂಜನಗೂಡು ಸಾಂಸ್ಕೃತಿಕ ನಗರದ ಮುಕುಟವಾಗಿದೆ. ಈ ಹಿನ್ನೆಲೆ ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹಚ್.ಸಿ.ಮಹದೇವಪ್ಪ ಹೇಳಿದರು.
ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಯಾತ್ರಿನಿವಾಸ ಹಾಗೂ ಲೋಕೋಪಯೋಗಿ ಕಾಮಗಾರಿಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಕೃಷಿ, ನೀರಾವರಿ, ಮೂಲಸೌಕರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು ಎಂದರು.
ನಂಜನಗೂಡು ತಾಲ್ಲೂಕು ಎಂದರೆ ನನಗೆ ಅತ್ಯಂತ ಪ್ರೀತಿ. ಅದರಂತೆ ಇಲ್ಲಿನ ಜನರು ಕೂಡ ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಅಭಿಮಾನ ಮತ್ತು ಪ್ರೀತಿಯನ್ನು ನೀಡಿದ್ದಾರೆ. ನಾನು ಕೂಡ ಈ ಭಾಗದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದೇನೆ. ರಾಜಕೀಯವಾಗಿ ದೇವನೂರು ಪ್ರಭಾವ ನನ್ನ ಮೇಲೆ ಬೀರಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗುರುಮಲ್ಲೇಶ್ವರ ಮಠವು ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಎಲ್ಲಾ ಧರ್ಮ ಹಾಗೂ ಜಾತಿಗಳು ಕೂಡ ಸ್ನೇಹ, ಸಹನೆ, ವಿಶ್ವಾಸದಿಂದ, ತಾರತಮ್ಯ, ಈರ್ಷೆ ಇಲ್ಲದೆ ಬದುಕಬೇಕು ಎಂಬುದು ಶ್ರೀ ಮಠದ ಉದ್ದೇಶವಾಗಿದೆ. ಮನುಕುಲದ ಉದ್ದಾರಕ್ಕೆ ಮಠದ ಕೊಡುಗೆ ಅನನ್ಯ. ಹೀಗಾಗಿ ಎಲ್ಲಾ ಜನರು ಗೌರವಿಸುವ ಕ್ಷೇತ್ರವಾಗಿದೆ. ರಾಜ್ಯದ ಉದ್ದಗಲಕ್ಕೂ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತದೆ ಎಂದರು.
ನಂಜನಗೂಡು ಭಾಗದದಲ್ಲಿ ವೀರಶೈವ ಚಳುವಳಿಯ ಕಾರ್ಯಚಟುವಟಿಕೆ ಚುರುಕುಗೊಳಿಸಿದ್ದು ಈ ಸಂಸ್ಥಾನವಾಗಿದೆ. ಈ ಮಹಾಸಂಸ್ಥಾನವು ಅಭಿವೃದ್ಧಿಯಲ್ಲಿ ಹಿಂದುಳಿಯಬಾರದು ಎಂಬ ಅಭಿಲಾಷೆ ನನಗಿದೆ. ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ದೇವನೂರು ಏತನೀರಾವರಿ ಯೋಜನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ. ಕೆಲವು ತೊಡಕುಗಳು ಬಗೆಹರಿದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ದೇವನೂರು ಏತನೀರಾವರಿ ಯೋಜನೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಭರವಸೆ ಇದೆ. ಬದನವಾಳು ಖಾದಿ ಕೇಂದ್ರದ ಅಭಿವೃದ್ಧಿಗೂ ಕೂಡ ನಮ್ಮ ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಂತಸ್ವಾಮೀಜಿಗಳು ಸಾನ್ಯಿಧ್ಯ ವಹಿಸಿದ್ದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು, ಉಪಾಧ್ಯಕ್ಷರಾದ ಶಶಿಕಲಾ, ವೀರಶೈವ ಮಹಾಸಭಾ ನಂಜನಗೂಡು ಘಟಕದ ಮಾಜಿ ಅಧ್ಯಕ್ಷ ದೇವನೂರು ಮಹದೇವಪ್ಪ, ಮುಖಂಡರಾದ ಕುರಟ್ಟಿ ಮಹೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.