ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ.
ಜ.5ರಂದು ಬೆಳಿಗ್ಗೆ 10.55 ಕ್ಕೆ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ನಂತರ ಕಲಾಮಂದಿರದಲ್ಲಿ ಆಯೋಜಿಸಿರುವ ಶ್ರೀಕುಲಾಲಗುಂಡ ಬ್ರಹ್ಮಾರ್ಯ ಕುಂಬಾರ ಸಂಘದ ಅಮೃತ ಮಹೋತ್ಸವ ಹಾಗೂ ರಾಜ್ಯ ಕುಂಬಾರರ ಮಹಾಸಮ್ಮೇಳನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಜ.6ರಂದು ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅಭಿನಂದನಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿರುವ ಕೆ.ಶಿವಕುಮಾರ್ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದು, ಬಳಿಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.
ಅರಸು ದಾಖಲೆ ಮುರಿಯುವ ದಿನವೇ ತವರಲ್ಲಿ ಸಿಎಂ
ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ ನಂತರ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾದ ದಾಖಲೆಯನ್ನು ಸರಿಗಟ್ಟುವ ದಿನವೇ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲಿ ಇರುವುದು ವಿಶೇಷವಾಗಿದೆ. ಮೈಸೂರಿನಲ್ಲೇ ವಿಶೇಷ ದಿನದಂದು ಇರುವ ಕಾರಣ ಅಭಿಮಾನಿಗಳು, ಬೆಂಬಲಿಗ ಮುಖಂಡರು ಸಂಭ್ರಮಿಸುವ, ಅಭಿನಂದನೆ ಸಲ್ಲಿಸುವ ಸಾಧ್ಯತೆ ಇದೆ.




