ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಆಯೋಜನೆಯಾಗಿದ್ದ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮ ಮುಗಿಸಿ ವಾಪಾಸ್ ಬೆಂಗಳೂರಿಗೆ ಮರಳುವ ವೇಳೆ ಮದ್ದೂರಿನಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮದ್ದೂರು ಟಿಫಾನೀಸ್ ಮಾಲೀಕ ರಾಮಕೃಷ್ಣ ಅವರು ನೀಡಿದ ಮದ್ದೂರು ವಡೆಯನ್ನು ಕಾರಿನಲ್ಲೇ ಕುಳಿತು ಸವಿದರು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಶ್ರೀನಿವಾಸ ಪ್ರಸಾದ್ ನಿಧನದಿಂದ ಹಳೆ ತಲೆಮಾರಿನ ರಾಜಕಾರಣಿಗಳ ಕೊಂಡಿ ಕಳಚಿಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಸಾದ್ ಅವರು ಮನುಷ್ಯತ್ವದ ಬಗ್ಗೆ ಗೌರವ ಇಟ್ಟಿದ್ದರು. ಹೀಗಾಗಿ ಯಾವುದೇ ಪಕ್ಷದಲ್ಲಿದ್ದರೂ ಮನುಷ್ಯತ್ವಕ್ಕೆ ಗೌರವ ನೀಡುತ್ತಿದ್ದರು ಎಂದರು.
ಯಾರಿಗೆಲ್ಲಾ ರಾಜಕಾರಣದಲ್ಲಿ ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಕ್ಲ್ಯಾರಿಟಿ ಇರುತ್ತದೆ ಅವರೆಲ್ಲರಿಗೂ ಮನುಷ್ಯತ್ವದ ಪರವಾಗಿ ಇರಲು ಸಾಧ್ಯ. ಶ್ರೀನಿವಾಸ ಪ್ರಸಾದ್ ಅವರಿಗೆ ಆ ಕ್ಲ್ಯಾರಿಟಿ ಇತ್ತು ಎಂದು ತಿಳಿಸಿದರು.
ರಾಜಕೀಯದಲ್ಲಿದ್ದಾಗ ಪರಸ್ಪರ ಟೀಕೆ ಮಾಡುವುದು ಸ್ವಾಭಾವಿಕ. ಶ್ರೀನಿವಾಸ ಪ್ರಸಾದ್ ಅವರು ನನ್ನನ್ನು ಅನೇಕ ಬಾರಿ ಟೀಕೆ ಮಾಡಿದ್ದಾರೆ. ನಾನೂ ಅನೇಕ ಬಾರಿ ಅವರ ಬಗ್ಗೆ ಮಾತನಾಡಿದ್ದೇನೆ. ಆದರೆ ನಮ್ಮಿಬ್ಬರ ಸ್ನೇಹಕ್ಕೆ ಎಂದಿಗೂ ಧಕ್ಕೆ ಬಂದಿರಲಿಲ್ಲ ಎಂದರು.





