ಮೈಸೂರು: ರಾಜ್ಯ ಕಂಡ ಅಪ್ರತಿಮ ದಲಿತ ನಾಯಕ, ನೇರ ನಿಷ್ಠೂರವಾದಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ಮೈಸೂರಿನ ನಿವಾಸಕ್ಕೆ ಇಂದು ಸಿಎಂ ಸಿದ್ದರಾಮಯ್ಯ ತೆರಳಿ ಅಂತಿಮ ದರ್ಶನ ಪಡೆದರು.
ಇನ್ನು ಪ್ರಸಾದ್ ಅವರ ಅಂತಿಮ ದರ್ಶನ ಪಡೆದ ಸಿಎಂ ಬಳಿಕ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಚುನಾವಣೆಗೆ ಕೆಲವು ದಿನಗಳು ಇರುವಂತೆಯೇ ಸತತ 7 ವರ್ಷಗಳಿಂದ ಮುನಿಸಿಕೊಂಡಿದ್ದ ಪ್ರಸಾದ್ ಹಾಗೂ ಸಿದ್ದರಾಮಯ್ಯ ಮತ್ತೆ ಒಂದಾದರು. ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಪ್ರಸಾದ್ ಅವರಿಗೆ ಹೆಚ್ಚಿನ ಬೆಂಬಲವಿದ್ದು, ಅವರ ಸಹಾಯಕ್ಕಾಗಿ ಸಿಎಂ ಬಂದಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಪ್ರಸಾದ್ ಅವರ ಆರೋಗ್ಯ ವಿಚಾರಿಸಲು ತಾವು ಬಂದಿರುವುದಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆಯ ದೋಸ್ತಿಯನ್ನು ನೆನೆದರು. ಇದಾದ ಸ್ವಲ್ಪ ದಿನಗಳ ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾದ ಪ್ರಸಾದ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ವಯೋ ಸಹಜ ಕಾಯಿಲೆ, ಬಹು ಅಂಗಾಂಗ ವೈಫಲ್ಯದಿಂದ ವಿ. ಶ್ರೀನವಾಸ್ ಪ್ರಸಾದ್ ಅವರು ಇಂದು ತಡರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಳಿಕ ಅವರನ್ನು ಮೈಸೂರಿನ ಅವರ ನಿವಾಸಕ್ಕೆ ಕರೆತರಲಾಯಿತು.
ನಂತರ ಅವರ ಅಭಿಮಾನಿಗಳ ದರ್ಶನಕ್ಕಾಗಿ ಅಶೋಕಪುರಂ ನ ಎಂಟಿಎಂ ಶಾಲೆಗೆ ಪಾರ್ಥಿವ ಶರೀರವನ್ನು ರವಾನಿಸಲಾಗಿದ್ದು, ನಾಳೆ (ಏ.30) ಮದ್ಯಾಹ್ನ ಬೌದ್ಧ ಧರ್ಮದ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಪುತ್ರಿ ಮಾಹಿತಿ ನೀಡಿದ್ದಾರೆ.