ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ ಆಗಿವೆ ಎಂಬುದರ ಚರ್ಚೆ ಆಗಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ತಮ್ಮ ಅವಧಿಯಲ್ಲಿ ಒಂದು ಕ್ರಾಂತಿ ತಂದಿದ್ದರು. ಗ್ರಾಮಾಂತರ ಮಟ್ಟದಲ್ಲಿ ಇಂದಿಗೂ ಅವರನ್ನು ಹೆಚ್ಚು ನೆನೆಯುತ್ತಾರೆ. ಆದರೆ, ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಏನು? ಸಿದ್ದರಾಮಯ್ಯ ಅವರು ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ. ತವರಿಗಾಗಿ ಅವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಟೀಕಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ತಕರಾರಿಲ್ಲ. ಆದರೆ, ಗ್ಯಾರಂಟಿ ಯೋಜನೆ ಸರಿಯಾಗಿ ನಡೆಯುತ್ತಿಲ್ಲ. ಗೃಹಲಕ್ಷ್ಮಿಹಣ ನಿಜಕ್ಕೂ ಬರುತ್ತಿದೆಯೇ? ಯುವನಿಧಿ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಕರೆಂಟ್ ಬಿಲ್ ಹಣವನ್ನು ಎಲ್ಲೋ ಕಿತ್ತು ಎಲ್ಲೋ ಕೊಡುತ್ತಿದ್ದಾರೆ. ಫ್ರೀ ಬಸ್ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ ಆರ್ಥಿಕ ನಷ್ಟದಲ್ಲಿದ್ದು, ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಕಾಂಗ್ರೆಸ್ ನಾಯಕರೇ ಹೇಳಬೇಕು. ನಮಗೆ ಸಿಎಂ ಬದಲಾವಣೆ ಬಗ್ಗೆ ಚಿಂತೆ ಇಲ್ಲ. ಜನರಿಗೆ ಒಳ್ಳೆಯ ಕಾನೂನು ಸುವ್ಯವಸ್ಥೆ ಕೊಡುವ ಮುಖ್ಯಮಂತ್ರಿ ಬೇಕಾಗಿದೆ. ಆದರೆ, ಸಿಎಂ ಬದಲಾವಣೆಯಿಂದ ಇದು ಸಾಧ್ಯವಿದೆ ಎಂದು ನಮಗೆ ಅನಿಸುತ್ತಿಲ್ಲ ಎಂದರು.





