ಮೈಸೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮತ್ತೊಂದು ಚಂಡಮಾರುತ ರೂಪುಗೊಂಡಿದೆ. ಇದರಿಂದ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಮೋಡಕವಿದ ವಾತವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಮೈಸೂರಲ್ಲೂ ಸಹ ಮುಂಜಾನೆಯಿಂದಲೇ ಮೋಡಕವಿದ ವಾತವರಣ ಸೃಷ್ಟಿಯಾಗಿದೆ.
ರಾಜ್ಯದ ಕೆಲವೆಡೆ ಇಂದು ಭಾರಿ ಮಳೆಯಾಗುವ ಸಂಭವವಿದ್ದು, ಮೈಸೂರು ಬೆಂಗಳೂರು ಸೇರಿದಂತೆ ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳೆದೊಂದು ವಾರದಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದ ಭಾಗಗಳಲ್ಲಿ ಫೆಂಗಲ್ ಚಂಡಮಾರುತದಿಂದಾದ ಅವಾಂತರಗಳಿಂದ ಜನರು ಸುಧಾರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯ ಮತ್ತೊಂದು ಚಂಡಮಾರುತ ಆತಂಕ ಸೃಷ್ಟಿಸಿದೆ.
ತಮಿಳುನಾಡಲ್ಲಿ ವ್ಯಾಪಕ ಮಳೆ
ವಾಯುಭಾರ ಕುಸಿತದಿಂದ ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತಮಿಳುನಾಡಿನ ಸುಮಾರು 22 ಜಿಲ್ಲೆಗಳಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈಗಾಗಲೇ ಕಾರೈಕಲ್‌ನಲ್ಲಿ 8 ಸೆಂ.ಮೀ ಮಳೆಯಾಗಿದ್ದು, ಆದಿರಾಮಪಟ್ಟಣಂ, ನಾಗಪಟ್ಟಣಂ, ಕಡಲೂರು ಹಾಗೂ ಚೆನ್ನೈನ ಕೆಲವು ಭಾಗದಲ್ಲಿ 5 ರಿಂದ 7 ಸೆಂ. ಮೀ ಮಳೆಯಾಗಿದೆ.
ಡಿ.13 ರವರೆಗೆ ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ, ಕೇರಳ, ಪುದುಚೇರಿ, ಆಂಧ್ರಪ್ರದೇಶಕ್ಕೆ ಭಾರಿ ಮಳೆಯ ಎಚ್ಚರಿಕೆ ನೀಡಿದೆ.