Mysore
20
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು: ಈಶ್ವರ ಖಂಡ್ರೆ

ಸುತ್ತೂರು : ಇಂದಿನ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಮಹತ್ವ ತಿಳಿಸಿ, ನಮ್ಮ ತನ, ನಮ್ಮ ಸಂಸ್ಕೃತಿ ಉಳಿಸುವ ಕೆಲಸವನ್ನು ಪಾಲಕರು ಮಾಡಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.

ಸುತ್ತೂರು ಆದಿ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಮೇಳಕ್ಕೆ ಚಾಲನೆ ನೀಡಿ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಗಿಡದಲ್ಲಿ ಹೂ ಬಿಡುವುದು ಪ್ರಕೃತಿ, ಅದನ್ನು ಕಿತ್ತು ಎಸೆದರೆ ವಿಕೃತಿ, ಅದನ್ನು ದಾರದಿಂದ ಪೂಣಿಸಿದರೆ ಆಗುತ್ತದೆ ಆಕೃತಿ, ಆ ಆಕೃತಿಯನ್ನು ದೇವರಿಗೆ ಅರ್ಪಿಸುವುದು ನಮ್ಮ ಸಂಸ್ಕೃತಿ ಎಂದು ಹೇಳಿದರು.

ಇಂತಹ ಉದಾತ್ತ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕು, ಇದಕ್ಕಾಗಿ ನಿತ್ಯ ಮನೆಗಳಲ್ಲಿ ಶರಣರ ವಚನ, ದಾಸರ ಕೀರ್ತನೆಯನ್ನು ಮಕ್ಕಳಿಗೆ ಕಲಿಸಬೇಕು. ವಚನಗಳಲ್ಲಿನ ಅನುಭಾವ ಉತ್ತಮ ಪ್ರಜೆಗಳನ್ನು ರೂಪಿಸುತ್ತದೆ ಎಂದರು.

ಸುತ್ತೂರು ಸಂಸ್ಥಾನಕ್ಕೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದ್ದು, ಆದಿ ಶಿವರಾತ್ರೀಶ್ವರ ಶಿವಯೋಗಿಗಳ ಪರಂಪರೆ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದ್ದು, ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ಅನ್ನ, ಅಕ್ಷರ, ಆಶ್ರಯ ನೀಡಿ ಮಾಡುತ್ತಿರುವ ತ್ರಿವಿಧ ದಾಸೋಹ ಅನುಪಮವಾದ್ದು ಎಂದರು.

ಶಿಕ್ಷಣ, ಆರೋಗ್ಯ, ಸಮಾಜಸೇವೆ, ಧಾರ್ಮಿಕ, ಆಧ್ಯಾತ್ಮಿಕ ಲೋಕಕ್ಕೆ ವೀರಶೈವ ಲಿಂಗಾಯತ ಮಠಗಳು ನೀಡಿರುವ ಕೊಡುಗೆ ಸ್ಮರಿಸಿದ ಅವರು, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಮಠಾಧಿಪತಿಗಳ ನೇತೃತ್ವದಲ್ಲಿ ತಾವೂ ಕೂಡ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದು, ತಕ್ಷಣವೇ ಅದಕ್ಕೆ ಮನ್ನಣೆ ನೀಡಿ ಅಧಿಕೃತ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದರು.

ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶಾಸಕರಾದ ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಮಾಜಿ ಶಾಸಕ ಡಾ. ಯತೀಂದ್ರ, ಮಾಜಿ ಸಚಿವರಾದ ಗೀತಾ ಮಹದೇವ ಪ್ರಸಾದ್ ಮತ್ತಿತರರು ಭಾಗಿಯಾಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!