ಎಚ್.ಡಿ.ಕೋಟೆ: ಯುಗಾದಿ ಹಬ್ಬದ ಮಾರನೇಯ ದಿನವಾದ ಇಂದು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಇಟ್ನಾ ಗ್ರಾಮದಲ್ಲಿ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಚಿಕ್ಕದೇವಮ್ಮನವರ ಬೆಟ್ಟದಿಂದ ಅಮ್ಮನವರನ್ನು ತಂದು ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಪೂಜಿಸಲಾಯಿತು.
ಬಳಿಕ ಸಂಜೆಯ ವೇಳೆಗೆ ಅಮ್ಮನವರನ್ನು ಹಾಲುಗಡುವಿನಿಂದ ಇಟ್ನಾ ಗ್ರಾಮಕ್ಕೆ ತಂದು ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಅಮ್ಮನವವರನ್ನು ಕಣ್ತುಂಬಿಕೊಳ್ಳಲು ಇಟ್ನಾ ಗ್ರಾಮಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಇಂದು ಇಟ್ನಾ ಗ್ರಾಮಕ್ಕೆ ಬರುವ ಸಾರ್ವಜನಿಕರಿಗೆ ಸಂಜೆ 4 ಗಂಟೆಯವರೆಗೂ ಅನ್ನದಾನ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇಂದು ಸಂಜೆ ಗ್ರಾಮದಲ್ಲಿ ಸಾಮಾಜಿಕ ನಾಟಕ ಏರ್ಪಡಿಸಲಾಗಿದ್ದು, ನಾಳೆ ಅಮ್ಮನವರನ್ನು ಚಿಕ್ಕದೇವಮ್ಮ ಬೆಟ್ಟಕ್ಕೆ ತರಲಾಗುತ್ತದೆ.





