ಮೈಸೂರು: ಬೆಂಗಳೂರಿನ ಕೋರಮಂಗಲದಲ್ಲಿ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಸೈಯದ್ ಕಬೀರುದ್ದೀನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು.
ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮರದೂರು ಗ್ರಾಮದ ಸೈಯದ್ ಗಯಾಸುದ್ದೀನ್ ಮತ್ತು ಆಸೀಯಾಭಿ ರವರ ಮಗನಾದ ಸೈಯದ್ ಕಬೀರುದ್ದೀನ್ 2009ನೇ ಸಾಲಿನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ನೇಮಕಗೊಂಡಿದ್ದು, ಹುಣಸೂರು ಪಟ್ಟಣ, ಪಿರಿಯಾಪಟ್ಟಣ, ಸರಗೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಈಗ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೈಯರ್ ಕಬೀರುದ್ದೀನ್ ಅವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಹಾಗೂ ಪತ್ತೆ ಹಚ್ಚುವಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ೨೦೨೩ನೇ ಸಾಲಿನಲ್ಲಿ ಇವರು ತೋರಿದ ಅಸಾಧಾರಣ ನೈಪುಣ್ಯತೆ, ಪ್ರಾಮಾಣಿಕತೆ ಹಾಗೂ ದಕ್ಷತೆಗಾಗಿ ೨೦೨೩ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಅರ್ಹರಾಗಿದ್ದಾರೆ.
ಇವರು 2023ನೇ ಸಾಲಿನಲ್ಲಿ ಸಾಮಾನ್ಯ ಕಳವು ಮತ್ತು ಮನೆ ಕಳವು ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಪಟ್ಟ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದಾರೆ.
ಇವರ ಸಾಧನೆಗೆ ಹುಣಸೂರು ವಿಭಾಗ ಡಿವೈಎಸ್ಪಿ ಗೋಪಾಲಕೃಷ್ಣ, ಎಚ್.ಡಿ ಕೋಟೆ ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಗಂಗಾಧರ್ ಈಚೆಗೆ ವರ್ಗಾವಣೆಗೊಂಡ ಶಬ್ಬೀರ್ ಹುಸೇನ್, ಸಬ್ ಇನ್ಸ್ಪೆಕ್ಟರ್ ಗಳಾದ ಚಿಕ್ಕನಾಯಕ, ಸುರೇಶ್ ನಾಯಕ, ಗೌರಿಶಂಕರ್, ಸುಬ್ರಮಣ್ಯ ಹಾಗೂ ಸಿಬ್ಬಂದಿ ಕುಟುಂಬದವರು, ಸ್ನೇಹಿತರು ಹಾಗೂ ಹಿತೈಷಿಗಳು ಶುಭ ಕೋರಿದ್ದಾರೆ.





