Mysore
25
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಚಾಮುಂಡಿ ಪ್ರಾಧಿಕಾರ ಜಟಾಪಟಿ: ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ ಎಂದ ಪ್ರಮೋದಾದೇವಿ ಒಡೆಯರ್‌

ಮೈಸೂರು: ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಖಾಸಗಿ ಆಸ್ತಿ. ಅದರ ಪ್ರಾಧಿಕಾರಿ ಮಾಡುವುದು ಕಾನೂನು ಬದ್ಧವಲ್ಲ ಎನ್ನುವ ಮೂಲಕ ಚಾಮುಂಡಿಬೆಟ್ಟ ಅಭಿವೃದ್ದಿ ಪ್ರಾಧಿಕಾರ ರಚನೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ವಿರೋಧ ವ್ಯಕ್ತಪಡಿಸಿದರು.

ಈ ಕುರಿತು ಸೋಮವಾರ(ಆ.12) ಮೈಸೂರಿನ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ, ಹೀಗಾಗಿ ಕೋರ್ಟ್‌ ಮೊರೆ ಹೋಗಲಾಗಿದೆ. ಪ್ರಾಧಿಕಾರದ ಹೆಸರಲ್ಲಿ ಸರ್ಕಾರ ರೂಲಿಂಗ್‌ ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದು ಹೇಳಿದ್ದಾರೆ.

ದೇವಸ್ಥಾನ ಖಾಸಗಿ ಆಸ್ತಿ ಅಂತ ಸರ್ಕಾರಕ್ಕೂ ಗೊತ್ತಿದೆ. ಚಾಮುಂಡಿ ಬೆಟ್ಟ ನಿರ್ವಹಣೆ ಸಂಬಂಧ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸರ್ಕಾರಕ್ಕೆ ಪತ್ರ ಬರೆದಿದ್ದು ನಿಜ. ನಿರ್ವಹಣೆ ಮಾಡಲು ಆಗೋದಿಲ್ಲ ಅಂತಾ ಬರೆದಿದ್ದು. ಆದರೆ ನೀವೆ ಸ್ವಂತ ಮಾಡಿಕೊಳ್ಳಿ ಅಂತಾ ನಾವು ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗ ನಾವು ನಿರ್ವಹಣೆ ಮಾಡೋ ಬಗ್ಗೆ ಹೆಚ್ಚೇನು ಮಾತಾಡೋದಿಲ್ಲ. ನ್ಯಾಯಾಲಯ ಹಾಗೂ ಸರ್ಕಾರ ಈಗಲೂ ಗ್ರೀನ್‌ ಸಿಗ್ನಲ್‌ ಕೊಟ್ಟರೆ ಚಾಮುಂಡಿ ಬೆಟ್ಟವನ್ನು ನಾವೇ ನಿರ್ವಹಣೆ ಮಾಡ್ತೇವೆ. ಬೆಟ್ಟವನ್ನು ಬೆಟ್ಟವಾಗಿಯೇ ಉಳಿಸಿಕೊಳ್ಳಬೇಕು ಅನ್ನೋದು ನಮ್ಮ ವಾದ ಎಂದರು.

ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. 2001ರ ಕೇಸ್‌ನ ತೀರ್ಪು ನಮ್ಮ ಪರ ಬಂದರೆ ನಾವೇ ನಿರ್ವಹಿಸುತ್ತೇವೆ. ಪೂರ್ವಜರ ಹಾದಿಯಲ್ಲೇ ಸಾಗುತ್ತಿದ್ದೇವೆ, ಬೇರೆ ಮಾರ್ಗದಲ್ಲಿ ಹೋಗಲ್ಲ. ಚಾಮುಂಡಿಬೆಟ್ಟ ಉಳಿಸಿಕೊಳ್ಳಲು ಹೊರಟಿದ್ದೇವೆ. ಬೆಟ್ಟ ಬೆಟ್ಟದ ರೀತಿ ಇರಲಿ. ವಯನಾಡು, ಕೊಡಗು ರೀತಿ ಆಗದೆ ಇರಲಿ ಎನ್ನುವುದು ನಮ್ಮ ಉದ್ದೇಶ. 1950 ರಲ್ಲಿ ಖಾಸಗಿ ಪ್ರಾಪರ್ಟಿ ಲಿಸ್ಟ್‌ ಮಾಡಿದ್ದರು, ಆವಾಗ ಲಿಸ್ಟ್‌ನಲ್ಲಿ ಕೊಟ್ಟಿದ್ದು ಬಿಟ್ಟು ಬೇರೆನೂ ನಾವು ಇಟ್ಟುಕೊಂಡಿಲ್ಲ. ಅನೇಕ ಕಾರ್ಖಾನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಅದನ್ನ ಕೇಳಿದ್ದೇವಾ? ಬೇರೆ ಏನನ್ನೂ ಕೇಳುತ್ತಿಲ್ಲ. ಸರ್ಕಾರ ಬದಲಾದಾಗ ಪರಿಸ್ಥಿತಿ ಸಹ ಬದಲಾಗುತ್ತಿದೆ. ಪ್ರಾಧಿಕಾರ ಮಾಡಿರುವುದು ಸರಿಯಲ್ಲ, ಸರ್ಕಾರದ ಈ ನಡೆ ಸರಿಯಿಲ್ಲ ಎಂದಿದ್ದಾರೆ.

Tags: