ಮೈಸೂರು : ಮೈಸೂರು ಪ್ರಾಂತ್ಯಕ್ಕೆ ರಾಜಮನೆತನ ನೀಡಿರುವ ಕೊಡುಗೆಯ ಋಣ ತೀರಿಸಲಿಕ್ಕೆ ಚಾಮುಂಡೇಶ್ವರಿ ಒಂದು ಅವಕಾಶ ನೀಡಿದ್ದಾಳೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.
ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ಹೋರಾಟಕ್ಕೆ, ಕಾಂಗ್ರೆಸ್ ಪಕ್ಷದ ಪ್ರತಿಷ್ಠಾಪನೆಗೆ, ಬಿಜೆಪಿ ಪಕ್ಷಕ್ಕೆ ನೆಲೆ ನೀಡರುವಂತ ಪ್ರಾಂತ್ಯ ನಮ್ಮ ಮೈಸೂರು. ಇಂಥ ಸ್ಥಳದಿಂದ ನಮ್ಮ ಯುವರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚುನಾವಣೆಗೆ ನಿಂತಿದ್ದಾರೆ. ಯುವರಾಜರು ನನ್ನ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಬಳಿಗೆ ಬಂದಿದ್ದಾರೆ ಎಂದರು.
ಯಾವುದೇ ಆಸೆ ಆಮಿಶಗಳು ಬರಲಿ, ರಾಜಮನೆತನ ನೀಡಿರುವ ಕೊಡುಗೆಯನ್ನು ನಾವು ತೀರಿಸಲಿಕ್ಕೆ ಸಾಧ್ಯವಿಲ್ಲ. ನಮ್ಮ ತಾತ, ತಂದೆ ಹಾಗೂ ನಾವೆಲ್ಲರು ಅವರ ಕೊಡುಗೆಗಳನ್ನು ಅನುಭವಿಸಿದ್ದೇವೆ. ಹೀಗಾಗಿ ಯುವರಾಜರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಅವರ ಋಣ ತೀರಿಸುವ ಅವಕಾಶ ಬಂದಿದೆ ಎಂದರು.
ಚುನಾವಣೆಯಲ್ಲಿ ವಿಜಯ ಸಾಧಿಸಿದರೆ ಹಿಂದೆ ಯಾವುದೇ ಸಂಸದ, ಶಾಸಕ, ಮಂತ್ರಿಗಳು ಮಾಡ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಓಟು ಯುವರಾಜರಿಗೆ, ಜೆಡಿಎಸ್ ಓಟು ಬಿಜೆಪಿಗೆ, ಮಂಡ್ಯದಲ್ಲಿ ನಮ್ಮ ಓಟು ಜೆಡಿಎಸ್‌ಗೆ, ಚಾಮರಾಜನಗರದಲ್ಲಿ ನಮ್ಮ ಓಟು ಬಿಜೆಪಿಗೆ ಎಂಬುದನ್ನು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಂಡು, ಗಟ್ಟಿ ನಿರ್ಧಾರ ಮಾಡಿಕೊಳ್ಳಿ ಎಂದು ಮೈಸೂರು-ಕೊಡಗು ಕ್ಷೇತ್ರದ ಮತದಾರರಿಗೆ ಮನವಿ ಮಾಡಿದರು.