ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಉಚ್ಛಾಟನೆ ಮಾಡುವ ಶಕ್ತಿ ಇಲ್ಲವಾದರೇ, ಡಿಕೆಶಿಯನ್ನೇ ಈ ರಾಜ್ಯದ ಸಿಎಂ ಮಾಡಿ ಎಂದು ವಿಧಾನ ಪರಿಷತ್ ವಿಪಕ್ಷ ಛಲವಾದಿ ನಾರಾಯಣಸ್ವಾಮಿ ಸವಾಲ್ ಎಸೆದಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.28) ಡಿಸಿಎಂ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಬಿಜೆಪಿ ಅವರು ಮಾತನಾಡಿದರೆ ಕಾಂಗ್ರೆಸ್ ಅವರು ಬಟ್ಟೆ ಬಿಚ್ಚಿಕೊಂಡು ಬರುತ್ತಾರೆ. ಅದೇ ಅವರ ಡಿಸಿಎಂ ಡಿ.ಕೆ.ಶಿವಕುಮಾರ್ ಮೊನ್ನೆ ಸಂವಿಧಾನ ಬದಲಾಯಿಸಿ ಮುಸಲ್ಮಾನ ಸಮುದದಾಯಕ್ಕೆ ಮೀಸಲಾತಿ ನೀಡುತ್ತೇವೆ ಎಂದಿದ್ದರು. ಇದರಿಂದ ದೇಶದಲ್ಲಿ ಕಾಂಗ್ರೆಸ್ ಬೆತ್ತಲಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಈ ವಿಚಾರವಾಗಿ ತಕ್ಷಣ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡಲಿಲ್ಲ ಅಂದರೆ ಸಿಎಂ ಸಿದ್ದರಾಮಯ್ಯ ಅವರನ್ನು ಉಚ್ಛಾಟನೆ ಮಾಡಲಿ. ಇನ್ನು ಉಚ್ಛಾಟನೆ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಧೈರ್ಯವಿದೆ ಎಂದು ನಾನು ಭಾವಿಸಿದ್ದೇನೆ. ಅವರಿಗೆ ಡಿಕೆಶಿಯನ್ನು ಉಚ್ಛಾಟನೆ ಮಾಡುವ ಶಕ್ತಿ ಇಲ್ಲ ಅಂದರೆ ಡಿ.ಕೆ. ಶಿವಕುಮಾರ್ ಅವರನ್ನೇ ಸಿಎಂ ಮಾಡಿ ನೀವು ಕೆಳಗಡೆ ಇಳಿಯಿರಿ ಎಂದು ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲೇ ಸವಾಲ್ ಹಾಕಿದ್ದಾರೆ.





