ಎಚ್.ಡಿ.ಕೋಟೆ: ತಾಲ್ಲೂಕಿನ ಮೈಸೂರು- ಮಾನಂದವಾಡಿ ಹೆದ್ದಾರಿಯ ಕೋಳಗಾಲ ಸಮೀಪ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ ೮.೩೦ ಸಂದರ್ಭದಲ್ಲಿ ಪಟ್ಟಣದ ವಡ್ಡರಗುಡಿ ಗ್ರಾಮದ ನಿವಾಸಿಗಳಾದ, ಪುರಸಭಾ ಸದಸ್ಯ ಸೋಮಶೇಖರ್ ಅವರ ಸಹೋದರಿಯ ಪುತ್ರರಾದ ಕೇಶವ, ಶ್ರೀನಿವಾಸ್, ನವೀನ, ಮದನ್ ಎಂಬವರು ಮೈಸೂರಿಗೆ ಕೆಲಸಕ್ಕಾಗಿ ಹೋಗುತ್ತಿದ್ದರು.
ಅದೇ ರಸ್ತೆಯಲ್ಲಿ ಮೈಸೂರು ಕಡೆಯಿಂದ ಚಿಕ್ಕದೇವಮ್ಮ ಬೆಟ್ಟಕ್ಕೆ ಪೂಜೆಗಾಗಿ ೪ ಕಾರುಗಳ ಮೂಲಕ ಮಂಡ್ಯ ಮೂಲದವರು ಬರುತ್ತಿದ್ದರು. ಮುಂದೆ ಬರುತ್ತಿದ್ದ ಮಂಡ್ಯ ಮೂಲದ ಬಲೆನೋ ಕಾರು ಎದುರಿಗೆ ಬರುತ್ತಿದ್ದ ವಡ್ಡರಗುಡಿಯವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರುಗಳು ಜಖಂಗೊಂಡವು. ಎರಡೂ ಕಾರುಗಳಲ್ಲಿ ಏರ್‌ಬ್ಯಾಗ್‌ಗಳು ಓಪನ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ವಡ್ಡರಗುಡಿ ಗ್ರಾಮದ ನಾಲ್ವರು ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದಾಗ ಅಕ್ಕಪಕ್ಕದ ನಿವಾಸಿಗಳು ಆರೈಕೆ ಮಾಡಿ ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರೆಗೆ ರವಾನಿಸಿದರು. ಇವರಲ್ಲಿ ಮದನ್ ಮತ್ತು ಶ್ರೀನಿವಾಸ್ ಅವರ ಸ್ಥಿತಿ ಗಂಭೀರವಾಗಿದೆ.
ಮಂಡ್ಯದ ನಿವಾಸಿಗಳು ಅಪಘಾತವಾಗುತ್ತಿದ್ದಂತೆ ಹಿಂಬದಿಯಿಂದ ಬರುತ್ತಿದ್ದ ೩ ಕಾರುಗಳಲ್ಲಿ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಮಂಡ್ಯ ಮೂಲದ ಇಬ್ಬರಿಗೂ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಡ್ಯ ಮೂಲದವರ ಹೆಸರು ತಿಳಿದುಬಂದಿಲ್ಲ.





