ಮೈಸೂರು: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಾಗಿರುವ ವೇಳೆಯೇ ಬಿಜೆಪಿ ಪ್ರತಿನಿತ್ಯ ಒಂದಿಲ್ಲೊಂದು ನೂತನ ಸ್ಕೀಂಗಳೊಂದಿಗೆ ಮತದಾರರನ್ನು ಸೆಳೆಯಲು ಮುಂದಾಗುತ್ತಿದೆ. ಅದರಂತೆಯೇ ಇಂದು(ಏ.೨೧) ಮೈಸೂರಿನಲ್ಲಿ “ಬಿಜೆಪಿ ಮಹಾಸಂಪರ್ಕ ಅಭಿಯಾನ”ಕ್ಕೆ ಚಾಲನೆ ದೊರೆತಿದೆ.
ನಗರದ ಚಾಮರಾಜ ಕ್ಷೇತ್ರದ ವಾರ್ಡ್ ನಂ. 232 ಮತ್ತು 233 ವಾರ್ಡ್‌ಗಳಲ್ಲಿ ಕರ ಪತ್ರ ಹಂಚುವ ಮೂಲಕ ಮಹಾಸಂಪರ್ಕ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಚಾಲನೆ ನೀಡಿದರು.
ಬಳಿಕ ಮನೆ ಮನೆಗೆ ತೆರಳಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪರವಾಗಿ ಮತ ಯಾಚಿಸಿದರು. ಇವರಿಗೆ ಜೊತೆಯಾಗಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಸೇರಿದಂತೆ ಮೈಸೂರಿನ ಹಲವು ಬಿಜೆಪಿ ಮುಖಂಡರು ವಿಜಯೇಂದ್ರಗೆ ಸಾಥ್ ನೀಡಿದರು.
ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ಅಪಘಾತಕ್ಕೀಡಾಗಿ, ಮೈಸೂರು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಚನ್ನರಾಜು ಅವರ ಕುಶಲೋಪಾಯ ವಿಚಾರಿಸಿದರು.