ಮೈಸೂರು: ಸೂಕ್ತ ಕಾರಣವಿಲ್ಲದೇ ನನ್ನ ನಾಮಪತ್ರವನ್ನು ತಿರಸ್ಕರಿಸಿದ ಕಾರಣ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಆಯ್ಕೆಯನ್ನು ಅಸಿಂಧು ಗೊಳಿಸಿ, ಈ ಕ್ಷೇತ್ರಕ್ಕೆ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ಬಿಎಸ್‌ಪಿ (ಬಹುಜನ ಸಮಾಜ ಪಾರ್ಟಿ) ಪಕ್ಷದ ರೇವತಿ ರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ನಾಮಪತ್ರವನ್ನು ಯಾವುದೇ ಕಾರಣವಿಲ್ಲದೇ ಜಿಲ್ಲಾ ಚುನಾವಣಾಧಿಕಾರಿಗಳ ತಿರಸ್ಕರಿಸುವ ಮೂಲಕ ನನ್ನನ್ನು ಚುನಾವಣೆಯಲ್ಲಿ ನಿಲ್ಲದಂತೆ ಮಾಡಿದ್ದಾರೆ. ಈ ಕ್ರಮದ ಬಗ್ಗೆ ನ್ಯಾಯಾಲಯ ಕ್ರಮ ಕೈಗೊಳ್ಳಬೇಕು ಎಂದು ರೇವತಿರಾಜ್ ಅಲಿಯಾಸ್ ಭೀಮ ಪುತ್ರಿ ರೇವತಿ ರಾಜ್ ಚುನಾವಣಾ ಆಯೋಗದ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲೇನಿದೆ?: ಅರ್ಜಿದಾರರು ಏ.4 2024 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಕಾಲಂ 7, 7(A), 7(a)(b) ಗಳನ್ನು ಸರಿಯಾಗಿ ಭರ್ತಿ ಮಾಡಿಲ್ಲ ಎಂದು ಚುನಾವಣಾಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದರು. ಬಳಿ ಏ.5ರ ಬೆಳಿಗ್ಗೆ 11ರ ಒಳಗಾಗಿ ಎಲ್ಲವನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿದರೂ ಕೂಡಾ ಅರ್ಜಿ ಸರಿಯಾದ ಸಮಯಕ್ಕೆ ಬಂದಿಲ್ಲ ಎಂದು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು. ಈ ಸಂಬಂಧ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಸಕಾರಣವಿಲ್ಲದೇ ಚುನಾವಣಾ ಅಧಿಕಾರಿಗಳು ತಮ್ಮ ಅರ್ಜಿಯನ್ನು ತಿರಸ್ಕರಿಸಿದ್ದು, ಇದೊಂದು ಕಾನೂನು ಬಾಹಿರವಾಗಿದೆ. ಈ ಕೂಡಲೇ ಯದುವೀರ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಮರುಚುನಾವಣೆ ನಡೆಸಬೇಕು ಎಂದು ರೇವತಿ ರಾಜ್ ಅರ್ಜಿಯಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.





