ಮೈಸೂರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮೈಸೂರು ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ನ.12ರಂದು ವರ್ಷದ ಕೊನೆಯ ಹಾಗೂ ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಎಂ.ಎಲ್.ರಘುನಾಥ್ ತಿಳಿಸಿದರು.
ಬಾಕಿ ಇರುವ ರಾಜಿ?ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದಾದವುಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು. ಈ ಬಾರಿ 50ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ ಎಂದು ನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 1,12,443 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಈ ಪೈಕಿ 59,555 ಸಿವಿಲ್ ಪ್ರಕರಣಗಳು ಹಾಗೂ 52,888 ಕ್ರಿಮಿನಲ್ ಪ್ರಕರಣಗಳಾಗಿವೆ. ಇವುಗಳಲ್ಲಿ 38,752 ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆಯಿದೆ. ಈಗಾಗಲೆ 15,852 ಪ್ರಕರಣಗಳನ್ನು ರಾಜಿ ಆಗುವ ಸಾಧ್ಯತೆ ಇರುವ ಪ್ರಕರಣಗಳು ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.





