ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದ್ದರೆ, ಇತ್ತ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು(ಆ.19) ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ವಿಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಆಗ್ರಹಿಸಿ ವಿಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಕೂಡ ಇದಕ್ಕೆ ಪ್ರತಿಯಾಗಿ ಮೈಸೂರಲ್ಲಿ ಜನಾಂದೋಲನ ಸಮಾವೇಶ ಮಾಡಿ ಏಟಿಗೆ ಎದುರೇಟು ನೀಡಿದ್ದರು.
ಆದರೆ, ಹೀಗಾಗಲೇ ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿದೆ. ಹೀಗಾಗಿ ಮೈತ್ರಿ ಪಕ್ಷಗಳು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದೆ. ಕಾಂಗ್ರೆಸ್ ತನ್ನ ತಪ್ಪು ಮರೆಮಾಚಿಕೊಳ್ಳಲು ಕೇಂದ್ರ ಹಾಗೂ ರಾಜ್ಯಾಪಾಲರ ವಿರುದ್ಧ ಆರೋಪ ಹೊರಿಸುತ್ತಿದೆ ಎಂಬ ಜನಾಭಿಪ್ರಾಯವನ್ನು ಮೈತ್ರಿ ನಾಯಕರು ಬಿತ್ತಲಿದ್ದಾರೆ.