Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಎಚ್.ಡಿ.ಕೋಟೆ| ಹಕ್ಕಿಜ್ವರ ಭೀತಿ: ಬಾವಲಿ ಚೆಕ್‌ಪೋಸ್ಟ್‌ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ಭೇಟಿ

ಎಚ್.ಡಿ.ಕೋಟೆ: ರಾಜ್ಯದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಇಂದು ಎಚ್‌.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ಹಾಗೂ ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಅವರು ಕರ್ನಾಟಕ ಕೇರಳ ಭಾಗವಾದ ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್ ಅವರು, ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರವು ವೈರಸ್‌ನಿಂದ ಹರಡುವ ರೋಗ. ಟರ್ಕಿ ಕೋಳಿ, ಗಿನಿ ಕೋಳಿ, ಬಾತುಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಕ್ಕಿಗಳಿಂದ ಹರಡುತ್ತದೆ. ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರೋಗಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಇಕ್ಕೆಗಳು ಮನುಷ್ಯರು ಕುಡಿಯುವ ನೀರಿನಲ್ಲಿ ಬೆರೆತು ಕಲುಷಿತ ಗೊಂಡಾಗ ಈ ಕಾಯಿಲೆ ಹರಡುತ್ತದೆ. ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ ಎಂದು ಮಾಹಿತಿ ನೀಡಿದರು.

ಇನ್ನು ಈ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ ಅವರು, ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಹೆಚ್1 ಎನ್1 ಜ್ವರದ ಲಕ್ಷಣಗಳಂತೆ ಇರುತ್ತದೆ. ಜ್ವರ ಮತ್ತು ಕೆಮ್ಮು, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು ಹಾಗೂ ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಬೇಧಿಯು ಆಗಬಹುದು. ಉಸಿರಾಟದಲ್ಲಿ ತೊಂದರೆ ಕೂಡ ಆಗಬಹುದು ಎಂದು ಮಾಹಿತಿ ನೀಡಿದರು.

ಇನ್ನೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ ಅವರು,
* ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿ ಜ್ವರ ಸೋಂಕು ಹರಡದಂತೆ ತಡೆಯಬಹುದು.
* ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತು ಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸುವುದು.
* ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು.
* ಹಕ್ಕಿ ಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು.
* ಯಾವುದೇ ಜ್ವರವು ಕಾಣಿಸಿಕೊಂಡರು ತಕ್ಷಣ ಸ್ಥಳೀಯ ಆಶಾ ಕಾರ್ಯಕರ್ತರಿಗೆ ತಿಳಿಸಿ ಮತ್ತು ಡಿ.ಬಿ.ಕುಪ್ಪೆ ಪ್ರಾಥಮಿಕ ಆರೋಗ್ಯದ ವೈದ್ಯಾಧಿಕಾರಿಗಳ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿ ಎಂದು ತಿಳಿಸಿದರು

ನಂತರ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಅವರು ಮಾತನಾಡಿ, ನಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಹಕ್ಕಿಜ್ವರ ಪ್ರಕರಣಗಳು ಕಂಡು ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಎಲ್ಲಾ ಕೋಳಿ ಫಾರಂಗಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದೇವೆ. ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿ ವಾಹನಗಳ ತಪಾಸಣೆ ಮಾಡಿ ಸ್ಪ್ರೇಯಿಂಗ್ ಮಾಡುತ್ತಿದ್ದೇವೆ. ಯಾವುದೇ ಕೋಳಿ ಹಾಗೂ ಪಕ್ಷಿಗಳು ಸತ್ತಿರುವುದು ಕಂಡು ಬಂದರೆ ತಕ್ಷಣ ಸ್ಥಳೀಯ ಪಶು ಸಂಗೋಪನ ಇಲಾಖೆಗೆ ತಿಳಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ವರ್ಗದವರಾದ ರವಿ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.

 

Tags:
error: Content is protected !!