ಹುಣಸೂರು : ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ 17 ವರ್ಷದ ಅಪ್ರಾಪ್ತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಸಾಗಾರಕಟ್ಟೆ ಗ್ರಾಮದ ಬಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಎಂಬ 17 ವರ್ಷದ ಅಪ್ರಾಪ್ತ ಯುವಕ ಸ್ನೇಹಿತರೊಂದಿಗೆ ಬೈಕ್ ವೀಲಿಂಗ್ ಮಾಡುತ್ತಿದ್ದಾನೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೀಲಿಂಗ್‌ಗೆ ಬಳಸಲಾಗಿದ್ದ ಡಿಯೋ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ವಾಹನದ ಮಾಲೀಕನ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಮಾಜಿಕ ಮಾಧ್ಯಮದ ‘ಲೈಕ್’ ಮತ್ತು ‘ಫಾಲೋವರ್ಸ್’ ಕ್ರೇಜ್‌ಗೆ ಒಳಗಾಗಿ ರಸ್ತೆಯಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಕೃತ್ಯಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತರುವುದರ ಜೊತೆಗೆ ರಸ್ತೆ ಸುರಕ್ಷತೆಗೆ ದೊಡ್ಡ ಧಕ್ಕೆ ತರುತ್ತವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯ ಬಗ್ಗೆ ತನಿಖೆ ಮುಂದುವರೆದಿದ್ದು, ಇನ್ನಿತರ ಸಂಬಂಧಿತರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಇಲವಾಲ ಪೊಲೀಸರು ತಿಳಿಸಿದ್ದಾರೆ.





