ಮೈಸೂರು: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಲಿದೆ. ಜತೆಗೆ ಏಪ್ರಿಲ್ 1ರಿಂದ ವಾಹನ ಸವಾರರು ಬೆಂಗಳೂರು – ಹೈದರಾಬಾದ್ ಹೆದ್ದಾರಿ ಹಾಗೂ ಬೆಂಗಳೂರು ಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್‌ನ ಹೊಸಕೋಟೆ – ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.
ಇನ್ನು ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದಾಗಿನಿಂದ ಎರಡನೇ ಬಾರಿಗೆ ಟೋಲ್ ದರ ಹೆಚ್ಚಳವಾಗುತ್ತಿದೆ. ಕಳೆದ ಬಾರಿಯ ಏಪ್ರಿಲ್‌ನಲ್ಲಿ ಟೋಲ್ ಹೆಚ್ಚಳ ಮಾಡಲಾಗಿತ್ತು. ಬಳಿಕ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ಈ ನಿರ್ಧಾರವನ್ನು ಕೈಬಿಡಲಾಗಿತ್ತು. ನಂತರ ಜೂನ್ ತಿಂಗಳಿನಲ್ಲಿ ಶೇ.22ರಷ್ಟು ಟೋಲ್ ಹೆಚ್ಚಳ ಮಾಡಲಾಗಿತ್ತು.
ಸದ್ಯ ದರ ಪರಿಷ್ಕರಣೆ ಬಗ್ಗೆ ವಾಹನ ಸವಾರರಿಗೆ ಕರಪತ್ರಗಳನ್ನು ಹಂಚಲಾಗುತ್ತಿದ್ದು, ದರಪಟ್ಟಿ ಫಲಕಗಳನ್ನೂ ಸಹ ತಿದ್ದುಪಡಿ ಮಾಡಲಾಗುತ್ತಿದೆ. ನೂತನ ಪರಿಷ್ಕರಣೆಯಲ್ಲಿ ಶೇ.3ರಷ್ಟು ದರವನ್ನು ಹೆಚ್ಚಳ ಮಾಡಲಾಗಿದೆ. ಕಣಮಿಣಕೆ ಗ್ರಾಮದ ಬಳಿ ಇರುವ ಟೋಲ್ ಕೇಂದ್ರದ ಈಗಿನ ಶುಲ್ಕ ಮತ್ತು ಪರಿಷ್ಕೃತ ಶುಲ್ಕದ ವಿವರ ಈ ಕೆಳಕಂಡಂತಿದೆ..
ಪ್ರಸ್ತುತ ಟೋಲ್ ದರ ( ರೂಪಾಯಿಗಳಲ್ಲಿ )
ವಾಹನ ಏಕಮುಖ ದ್ವಿಮುಖ
ಕಾರು 165 250
ಲಘು ವಾಣಿಜ್ಯ ವಾಹನ 270 405
ಟ್ರಕ್/ಬಸ್ 565 850
ಮೂರು ಆಕ್ಸೆಲ್ ವಾಣಿಜ್ಯ ವಾಹ 615 925
ನಿರ್ಮಾಣ ಯಂತ್ರಗಳು 885 1330
ದೊಡ್ಡ ಗಾತ್ರದ ವಾಹನ 1080 1620
4 ಅಥವಾ 6 ಆಕ್ಸೆಲ್‌ನ ಭಾರೀ ವಾಹನ 885 1330
ಪರಿಷ್ಕೃತ ದರ ( ರೂಪಾಯಿಗಳಲ್ಲಿ )
ವಾಹನ ಏಕಮುಖ ದ್ವಿಮುಖ
ಕಾರು 170 255
ಲಘು ವಾಣಿಜ್ಯ ವಾಹನ 275 415
ಟ್ರಕ್/ಬಸ್ 580 870
ಮೂರು ಆಕ್ಸೆಲ್ ವಾಣಿಜ್ಯ ವಾಹ 635 950
ನಿರ್ಮಾಣ ಯಂತ್ರಗಳು 910 1365
ದೊಡ್ಡ ಗಾತ್ರದ ವಾಹನ 1080 1620
4 ಅಥವಾ 6 ಆಕ್ಸೆಲ್‌ನ ಭಾರೀ ವಾಹನ 1110 1660
ಮಂಡ್ಯ ಗಣಂಗೂರು ಟೋಲ್ ಶುಲ್ಕ ( ಏಕಮುಖ): ಕಾರು/ವ್ಯಾನ್/ಜೀಪ್ 155ರಿಂದ 160ಕ್ಕೆ, ಲಘು ವಾಣಿಜ್ಯ ವಾಹನಗಳಿಗೆ 250ರಿಂದ 260ಕ್ಕೆ, ಟ್ರಕ್/ ಬಸ್/ ಎರಡು ಆಕ್ಸೆಲ್ ವಾಹನಗಳಿಗೆ ಶುಲ್ಕ 525ರಿಂದ 540 ರೂಪಾಯಿಗಳಿಗೆ ಏರಿಕೆಯಾಗಿದೆ. ಮೂರು ಆಕ್ಸೆಲ್ ವಾಣಿಜ್ಯ ವಾಹನಗಳಿಗೆ 575ರಿಂದ 590 ರೂಪಾಯಿಗಳಿಗೆ, ಭಾರೀ ಕಟ್ಟಡ ನಿರ್ಮಾಣ ವಾಹನಗಳು/ ಅರ್ಥ್ ಮೂವರ್ಸ್/ 4 ಅಥವಾ 6 ಆಕ್ಸೆಲ್‌ಗಳಿಗೆ 825ರಿಂದ 840 ರೂಪಾಯಿಗಳಿಗೆ ಏರಿಕೆಯಾಗಿದೆ.