ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ವಸ್ತು ಪ್ರದರ್ಶನಕ್ಕೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಕರ್ನಾಟಕ ವಸ್ತು ಪ್ರದರ್ಶನದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದ್ದಾರೆ.
ನಗರದಲ್ಲಿ ಇಂದು(ಫೆಬ್ರವರಿ.22) ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆಯನ್ನಿಟ್ಟು, ನನ್ನನ್ನು ಪ್ರಾಧಿಕಾರದ ಅಧ್ಯಕ್ಷನಾಗಿ ಮಾಡಿದಲ್ಲದೇ ಪ್ರಾಧಿಕಾರದ ಅಭಿವೃದ್ಧಿಗಾಗಿ 20 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ವರ್ಷದ 365 ದಿನಗಳ ಕಾಲ ವಸ್ತು ಪ್ರದರ್ಶನ ಆಯೋಜಿಸುವ ಉದ್ದೇಶವನ್ನಿಟ್ಟುಕೊಂಡು ನಾವು ಸಿಎಂ ಗಮನಕ್ಕೆ ಈ ಯೋಜನೆಯ ಬಗ್ಗೆ ಪ್ರಸ್ತಾವನೆ ನೀಡಿದ್ದೇವು. ಇದಕ್ಕೆ ಅವರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿ 20 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ವಸ್ತು ಪ್ರದರ್ಶನದ ಎ.ಬ್ಲಾಕ್ ನಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಬೇಲೂರು ಮತ್ತು ಹಳೇಬೀಡು ಮಾದರಿಯ ಕಟ್ಟಡ ನಿರ್ಮಾಣ ಮಾಡುವ ಯೋಜನೆ ತಯಾರಿಸಿದ್ದೇವೆ. ಅಲ್ಲಿ ವಾಟರ್ ಪೌಂಟೇನ್ ಸಹ ಇರುತ್ತದೆ. ಅಲ್ಲಿ ಈಗಾಗಲೇ 154 ಅಂಗಡಿ ಮಳಿಗೆಗಳು ಇವೆ. ನಮ್ಮ ಯೋಜನೆಗಳನ್ನ ಒಪ್ಪಿ ನಮಗೆ 20 ಕೋಟಿ ರೂ.ಗಳನ್ನು ನೀಡಿರುವುದಕ್ಕೆ ಮೈಸೂರಿನ ಜನತೆಯ ಪರವಾಗಿ ಹಾಗೂ ಪ್ರಾಧಿಕಾರದ ಪರವಾಗಿ ಸಿಎಂ ಸಿದ್ದರಾಮಯ್ಯರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲೂ ವಸ್ತು ಪ್ರದರ್ಶನ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಅಲ್ಲಿನ ಸ್ಥಳೀಯ ಜಿಲ್ಲಾಡಳಿತದೊಂದಿಗೆ ಸಭೆ ಕರೆದು ಅಲ್ಲೂ ಕೂಡ ವಸ್ತು ಪ್ರದರ್ಶನ ಆಯೋಜನೆ ಮಾಡುವ ಸಲುವಾಗ ಕೆಲಸ ಮಾಡುತ್ತೇವೆ. ಇನ್ನು ಮುಂಬರುವ ದಸರಾ ವಸ್ತು ಪ್ರದರ್ಶನ ಒಳಗೆ ಕಾಮಗಾರಿ ಮುಗಿಸುವ ಯೋಜನೆ ಇದೆ ಎಂದರು.





