ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಡಾ. ರೇಹಾನ್ ಅಹಮದ್ ಹಲ್ಲೆಗೊಳಗಾದ ವೈದ್ಯ. ನಿನ್ನೆ 7 ವರ್ಷದ ಬಾಲಕಿ ಕೈ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಳು. ಈ ಸಮಯದಲ್ಲಿ ಆ ಬಾಲಕಿಯನ್ನು ಇಬ್ಬರು ಪುರುಷರು ಹಾಗೂ ನಾಲ್ವರು ಮಹಿಳೆಯರು ಅಲ್‌ಅನ್ಸಾರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರೇಹಾನ್ ಅಹಮದ್ ಆ ಬಾಲಕಿಗೆ ಚಿಕಿತ್ಸೆ ನೀಡಿ ಮೂಳೆ ಎಕ್ಸ್‌ರೆಗೆ ಕಳುಹಿಸಿದ್ದಾರೆ.
ನಂತರ ಎಕ್ಸ್ ರೇ ವರದಿಯಲ್ಲಿ ಆ ಬಾಲಕಿಯ ಬೆರಳಿನ ಮೂಲೆಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ತಿಳಿದು ಬಂದಿದೆ. ಬಾಲಕಿಗೆ ಡಾ. ರೇಹಾನ್ ಅಹಮದ್ ಚಿಕಿತ್ಸೆ ನೀಡುವ ಸಮಯದಲ್ಲಿ ಇಬ್ಬರು ಪುರುಷರು ಎಮರ್ಜೆನ್ಸಿ ವಾರ್ಡಿಗೆ ಏಕಾಏಕಿ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂದ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ವೈದ್ಯ ಡಾ. ರೇಹಾನ್ ಅಹಮದ್ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.