ಮೈಸೂರು ; ಚಾಮುಂಡಿ ಬೆಟ್ಟದಲ್ಲಿ ೨ನೇ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿದ್ದು, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮುಂಜಾನೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ಅಭಿಷೇಕದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಭಕ್ತರು ಸಹ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ತಾಯಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಇನ್ನು ಆಷಾಢ ಶುಕ್ರವಾರದ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಬಗೆಯ ಹೂಗಳು, ಹಣ್ಣುಗಳು & ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ನಾಗಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಕಂಗೊಳಿಸುತ್ತಿದ್ದು, ಭಕ್ತರು ಉತ್ಸವ ಮೂರ್ತಿಯ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇನ್ನು ಚಾಮುಂಡಿಬೆಟ್ಟಕ್ಕೆ ಇಂದು ಸಹ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದು, ಬೆಟ್ಟಕ್ಕೆ ಹೋಗಲು ಉಚಿತ ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತರಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ತಾಯಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೆಟ್ಟಿಲುಗಳಿಂದಲೂ ಕೂಡ ಸಹಸ್ರಾರು ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದು, ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನ ಒದಗಿಸಲಾಗಿದೆ.