ಮೈಸೂರು: ಭಾರತೀಯ ಸೇನೆಯ ಮುಖ್ಯಸ್ಥರಾದ ಕೆ.ಎಸ್.ತಿಮ್ಮಯ್ಯ ಅವರ ಜನ್ಮದಿನದ ಅಂಗವಾಗಿ ‘ವನ್ಯಜೀವಿಗಳ ಜಲಪಾತ್ರೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.೩೧ರಂದು ಬೆಳಿಗ್ಗೆ ೮ರಿಂದ ೧೦ರವೆರೆಗೆ ಭಾರತೀಯ ಸೇನಾ ಮಾಜಿ ಮುಖ್ಯಸ್ಥರಾದ ಕೆ.ಎಸ್.ತಿಮ್ಮಯ್ಯ ಅವರ ಸ್ಮರಣಾರ್ಥ ವನ್ಯಜೀವಿಗಳ ಜಲಪಾತ್ರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಮಾಜಿ ಸೈನಿಕರಿಂದ ಚಾಮುಂಡಿಬೆಟ್ಟದ ರಸ್ತೆಗಳಲ್ಲಿ ಜೀವಿಸುವ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರಿನ ದಾಹವನ್ನು ನೀಗಿಸುವ ಸಲುವಾಗಿ ೨೦ ಸೀಮೆಂಟ್ ತೊಟ್ಟಿಗಳನ್ನು ರಸ್ತೆಗಳಲ್ಲಿ ಇರಿಸಲಾಗುವುದು ಎಂದರು.
ಪ್ರತಿ ಭಾನುವಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರಣ್ಯ ಇಲಾಖೆ ಹಾಗೂ ಅಲ್ಲಿನ ಗ್ರಾಮ ಪಂಚಾಯಿತಿಯವರು ಸೋಮವಾರದಿಂದ ಶನಿವಾರದವರೆಗೆ ಈ ಕಾರ್ಯವನ್ನು ನಿರ್ವಹಿಸಲು ತಿಳಿಸಲಾಗಿದೆ ಎಂದರು.
ಮೈಸೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ನಂಜುಂಡಸ್ವಾಮಿ, ಉಪಾಧ್ಯಕ್ಷ ನೀಲಕಂಠ ಕುಮಾರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಜಿನಿ ಸುಬ್ಬಯ್ಯ, ನಿರ್ದೇಶಕರಾದ ಕೋಮಲ ರಾವ್ ಹಾಗೂ ಲಕ್ಷ್ಮಿಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.