ಮೈಸೂರು: ಚಾಮುಂಡಿಬೆಟ್ಟ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ 2024ರ ಆಷಾಡ ಮಾಸದ ಪ್ರಯುಕ್ತ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳೊಂದಿಗೆ ಹಲವಾರು ಅನುಕೂಲ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.
ಚಾಮುಂಡಿಬೆಟ್ಟ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ 2024ರ ಆಷಾಡ ಮಾಸದ ಶುಕ್ರವಾರಗಳು ಮತ್ತು ವರ್ದಂತಿಯು ಜುಲೈ 12, 19, 26, 27 ಹಾಗೂ ಆಗಸ್ಟ್ 02 ರಂದು ಕಡೆಯ ಆಷಾಡ ಶುಕ್ರವಾರ ಈ ಐದು ದಿನಗಳು ಮಾತ್ರ ದೇವಾಲಯದ ವತಿಯಿಂದ ಕೆ.ಎಸ್.ಆರ್.ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಚಾಮುಂಡಿಬೆಟ್ಟಕ್ಕೆ ಪ್ರಯಾಣಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
ಆಷಾಡ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾರ್ವಜನಿಕ ವಾಹನಗಳನ್ನು ಚಾಮುಂಡಿಬೆಟ್ಟದ ಪ್ರವೇಶಕ್ಕೆ ನಿಷೇಧವಿಧಿಸಿದ್ದು, ಲಲಿತಾ ಮಹಲ್ ಪಾರ್ಕಿಂಗ್‌ನಲ್ಲಿಯೇ ಸಾರ್ವಜನಿಕರು ತಮ್ಮ ವಾಹನವನ್ನು ನಿಲ್ಲಿಸಿ, ಕೆ.ಎಸ್.ಆರ್.ಟಿಸಿ ವಾಹನಗಳ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಚಾಮುಂಡಿಬೆಟ್ಟಕ್ಕೆ ಆಗಮಿಸುವುದು. (ಶಕ್ತಿ ಯೋಜನೆ ಅನ್ವಯಿಸುತ್ತದೆ) ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಚಾಮುಂಡಿಬೆಟ್ಟ ಗ್ರಾಮದಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ ನ್ನು ಹಾಜರುಪಡಿಸಿ/ ಪರಿಶೀಲನೆಗೆ ಒಳಪಡಿಸಿ ಪ್ರವೇಶವನ್ನು ಪಡೆಯಬಹುದು.
ಅಪಾಡ ಮಾಸದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಪ್ರವೇಶಕ್ಕೆ ಯಾವುದೇ ಪಾಸ್ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಅನುಕೂಲಕ್ಕಾಗಿ ವಿಶೇಷವಾಗಿ ವ್ಯವಸ್ಥೆಯನ್ನು ಮಾಡಲಾಗಿರುವ ರೂ.300 ಗಳ ಪ್ರವೇಶ, ರೂ50 ಗಳ ಪ್ರವೇಶ ಮತ್ತು ಸರ್ವದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶವನ್ನು ಪಡೆಯಬಹುದು.
ಭಕ್ತಾದಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಲಲಿತಾಮಹಲ್ ಪಾರ್ಕಿಂಗ್ ಮತ್ತು ಮಹಿಷಾಸುರ ವೃತ್ತದ ಬಳಿ ಹಾಗೂ ವಿಶೇಷ ಪ್ರವೇಶದ ಬಳಿಯಲ್ಲಿಯೇ ಪ್ರವೇಶದ ಟಿಕೇಟ್ಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ತುರ್ತುಚಿಕಿತ್ಸೆ ವ್ಯವಸ್ಥೆ ಹಾಗೂ ತುರ್ತು ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ.
ಭಕ್ತಾಧಿಗಳಿಗೆ ಪ್ರಸಾದವನ್ನು ವಿತರಿಸುವ ಸಾರ್ವಜನಿಕರು, ಕಡ್ಡಾಯವಾಗಿ ಪ್ರಸಾದ ವಿತರಿಸುವ ಮೊದಲು ಅಂಕಿತಾಧಿಕಾರಿಗಳು, ಆಹಾರ ನಿಯಂತ್ರಣ ಇಲಾಖೆಯವರಿಂದ ದೃಢೀಕರಣವನ್ನು ಪಡೆದು, ಜಿಲ್ಲಾಧಿಕಾರಿಗಳ ಕಛೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಅನುಮತಿಯ ಪತ್ರವನ್ನು ಪಡೆದು ತಮಗೆ ನಿಗದಿಪಡಿಸಿರುವ ಸಮಯದಲ್ಲಿ ಬಂದು ನಿಗದಿತ ಸ್ಥಳಗಳಲ್ಲಿ ಪ್ರಸಾದವನ್ನು ವಿತರಿಸುವುದು ಹಾಗೂ ಆ ಸ್ಥಳವನ್ನು ತಾವೆ ಸ್ವಚ್ಚಗೊಳಿಸಬೇಕು.
2024ರ ಆಷಾಢ ಮಾಸವನ್ನು ಚಾಮುಂಡಿಬೆಟ್ಟದಲ್ಲಿ “ಪ್ಲಾಸ್ಟಿಕ್ ಮುಕ್ತಾ ಆಷಾಡ ಮಾಸವೆಂದು ಘೋಷಿಸಿರುವುದರಿಂದ” ಚಾಮುಂಡಿಬೆಟ್ಟಕ್ಕೆ ಯಾವುದೇ ಪ್ಲಾಸ್ಟಿಕ್ ತರುವುದನ್ನು ನಿಷೇದಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ತಂದದಲ್ಲಿ ದಂಡ ವಿಧಿಸಲಾಗುವುದು. ಚಾಮುಂಡಿಬೆಟ್ಟದಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು, ಯಾವುದೇ ಪ್ಲಾಸ್ಟಿಕ್ ಬಳಸದಂತೆ ಹಾಗೂ ಯಾವುದೇ ಪೂಜಾ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರೆ ಪ್ಲಾಸ್ಟಿಕ್ ಮೂಲಕ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇದಿಸಿದೆ. ಒಂದು ವೇಳೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ದಂಡ ವಿಧಸುವುದಲ್ಲದೆ ಅಂಗಡಿಯನ್ನು ತೆರವುಗೊಳಿಸಲಾಗುತ್ತದೆ.
ಆಷಾಡ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಅಧಿಕವಾಗುವುದರಿಂದ ಭದ್ರತಾ ಹಿತದೃಷ್ಟಿಯಿಂದ ಸೂಕ್ತ ಭದ್ರತೆಗೆ ಸಿಸಿ ಕಾಮೆರಾ ವ್ಯವಸ್ಥೆಯ ಜೊತೆಗೆ ಧ್ವನಿ ವರ್ಧಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಕ್ತಾಧಿಗಳು ಸಹಕರಿಸಬೇಕು.
ಈ ಅಗತ್ಯ ಮೂಲಭೂತ ಸೌಕರ್ಯಗಳನ್ನು ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದು, ಇದನ್ನು ಸರ್ಮಪಕವಾಗಿ ಸದುಪಯೋಗಪಡಿಸಿಕೊಂಡು ಜಿಲ್ಲಾಡಳಿತದೊಂದಿಗೆ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.