Mysore
23
overcast clouds

Social Media

ಬುಧವಾರ, 14 ಜನವರಿ 2026
Light
Dark

ವಾಹನ ಸವಾರರು ಹೆಲ್ಮೆಟ್‌ ಬಳಸುತ್ತಿದ್ದಾರೆಯೇ? : ಜಾಗೃತಿ ಮೂಡಿಸಲು ಬಂದ ಯಮಧರ್ಮ

ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬುಧವಾರ, ‘ಯಮಧರ್ಮನ ವೇಷಧರಿಸಿ ಸಂಚಾರ ನಿಯಮ ಪಾಲಿಸದಿದ್ದರೆ ನೀನು ಸೀದಾ ಯಮನ ಬಳಿ’ ಎಂಬ ಘೋಷ ವಾಕ್ಯದೊಂದಿಗೆ ವಾಹನ ಸವಾರರ ಗಮನ ಸೆಳೆದರು. ಡಿಸಿಪಿ ಕೆ.ಎಸ್.ಸುಂದರ್ ರಾಜ್ ಎಳ್ಳು ಬೆಲ್ಲ ಹಾಗೂ ಗುಲಾಬಿ ನೀಡಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.

ಪೊಲೀಸರು, ವಾಹನಗಳನ್ನು ತಡೆಯುತ್ತಿದ್ದುದನ್ನು ಗಮನಿಸಿದ ಕೆಲವರು ಪರಾರಿ ಆದರೆ, ಕೆಲವರು ಸಿಕ್ಕಿಕೊಂಡರು. ದಂಡ ಕಟ್ಟಬೇಕೆನ್ನುವ ಚಿಂತೆ, ತಪ್ಪು ಮಾಡಿದ ಭಾವದಿಂದ ಅವರ ಮುಖ ಕಳೆಗುಂದಿತ್ತು.

ಚಾಲಕರು ವಾಹನದಿಂದ ಇಳಿದು ದಂಡವನ್ನು ಕಟ್ಟಲು ಹಣಕ್ಕಾಗಿ ಜೇಬಿಗೆ ಕೈಹಾಕುತ್ತಿದ್ದಂತೆ, ಪೊಲೀಸರು ಗುಲಾಬಿ ಹೂ ಹಾಗೂ ಎಳ್ಳು ಬೆಲ್ಲ ನೀಡಲು ಮುಂದಾಗುತ್ತಿದ್ದರು. ಎಳ್ಳು ಬೆಲ್ಲ, ಹೂ ಸ್ವೀಕರಿಸಿದವರು ಮತ್ತೆ ಸಂಚಾರ ನಿಯಮ ಉಲ್ಲಂಘಿಸಿ, ತಪ್ಪು ಮಾಡುವುದಿಲ್ಲ ಎನ್ನುವ ಭರವಸೆ ನೀಡುತ್ತಿದ್ದುದು ವಿಶೇಷವಾಗಿತ್ತು. ಸಂಚಾರ ನಿಯಮಗಳನ್ನು ಪಾಲಿಸಿ, ವಾಹನದ ದಾಖಲಾತಿಗಳ ಸುರಕ್ಷತೆಗೆ ಆದ್ಯತೆ ನೀಡಿ, ವಿಮೆ ಮಾಡಿಸಿ, ಓವರ್ ಟೇಕ್ ಮಾಡುವುದನ್ನು ನಿಲ್ಲಿಸಬೇಕು, ಅಪಘಾತವಾಗದಂತೆ ಎಚ್ಚರವಹಿಸಬೇಕು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ, ಸುರಕ್ಷಿತ ವಾಹನ ಚಾಲನೆಗೆ ಮುಂದಾಗಿ… ಹೀಗೆ ಪೊಲೀಸರು ವಾಹನ ಸವಾರರಿಗೆ ಹತ್ತಾರು ಸಲಹೆಗಳನ್ನು ಪೊಲೀಸರು ನೀಡಿದರು.

ಡಿಸಿಪಿ ಸುಂದರ್ ರಾಜ್ ಅವರು ಮಾತನಾಡಿ, ದುಡಿಯುವ ವ್ಯಕ್ತಿಗೆ ಪ್ರಾಣ ಹಾನಿಯಾದರೆ ಆ ಕುಟುಂಬ ಬೀದಿಗೆ ಬರುತ್ತದೆ ಎಂಬುದನ್ನು ಪ್ರತಿಯೊಬ್ಬ ಚಾಲಕ ಮತ್ತು ಸವಾರರು ಮನಸ್ಸಿನಲ್ಲಿ ಸದಾ ಇಟ್ಟುಕೊಳ್ಳಬೇಕು. ಯಾವುದೇ ಪ್ರಾಣಹಾನಿ ಆಗದಂತೆ ವಾಹನ ಸಂಚಾರ ಮಾಡುವಾಗ ಸಂಚಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಚಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿ ಹೇಳಿದರು.

ಎಸಿಪಿ ಶಿವಶಂಕರ್ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗೂ ತಿಳಿವಳಿಕೆ ಇದ್ದರೂ ಕೂಡ ಸಾರ್ವಜನಿಕರು ಅದನ್ನು ಪಾಲಿಸುತ್ತಿಲ್ಲ. ಅಪಘಾತಗಳನ್ನು ತಪ್ಪಿಸಲು ಸವಾರರು ಹಾಗೂ ಚಾಲಕರ ಮನಸ್ಥಿತಿ ಬದಲಾಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವರಾಜ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಡಿ.ಮಮತಾ, ಸೀಟ್‌ಎಡ್ಜ್ ಚಿತ್ರದ ನಾಯಕ ಸಿದ್ದು ಮೂಲಿಮನಿ, ನಾಯಕನಟಿ ರವೀಕ್ಷಾ ಶೆಟ್ಟಿ, ಗಂಧದಗುಡಿ ಫೌಂಡೇಶನ್‌ನ ರಾಜ್ಯಾಧ್ಯಕ್ಷ ಆರ್ಯನ್ ಗಂಧದಗುಡಿ, ಮತ್ತಿತರರು ಉಪಸ್ಥಿತರಿದ್ದರು.

 

Tags:
error: Content is protected !!