ಭೇರ್ಯ ಮಹೇಶ್: ಕೆ.ಆರ್.ನಗರ ತಾಲ್ಲೂಕು ವರದಿಗಾರರು
ಕೆ.ಆರ್.ನಗರ: ಧಾರ್ಮಿಕ ಸ್ಥಳಗಳು ಕಟುಕರ ಕೇರಿಗಳಾಗಬಾರದು. ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮದ್ಯ – ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಅವರು ಪ್ರತಿಪಾದಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲ್ಲೂಕಿನ ಸುಪ್ರಸಿದ್ಧ ಕಪ್ಪಡಿ ಜಾತ್ರಾ ಮಹೋತ್ಸ ಹಿನ್ನೆಲೆಯಲ್ಲಿ ಪ್ರಾಣಿಬಲಿ ನಿಷೇಧ ಕುರಿತು ಪತ್ರಿಕಾಗೋಷ್ಠಿ ನಡೆಸಿ ಸುದೀರ್ಘವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸುಮಾರು 36,000 ದೇವಾಲಯಗಳು ಒಳಪಡುತ್ತವೆ. ನಾನು ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯಗಳಿಗೂ ಹಾಗೂ ನಮ್ಮ ಪಕ್ಕದ ನೇಪಾಳ ದೇಶಕ್ಕೂ ಭೇಟಿ ನೀಡಿ ಅಲ್ಲಿಯೂ ಪ್ರಾಣಿ ಬಲಿ ನಿಷೇಧಿಸುವಂತೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲ್ಲೂಕಿನ ಕಪ್ಪಡಿಯ ಶ್ರೀ ರಾಚಪ್ಪಾಜಿ ಜಾತ್ರೆಯು ಶಿವರಾತ್ರಿಯಿಂದ ಆರಂಭಗೊಂಡಿದ್ದು, ಯುಗಾದಿಯವರೆಗೆ ಜರುಗಲಿದೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಜಾತ್ರೆಗೆ ಸಹಸ್ರಾರು ಭಕ್ತರು ಆಗಮಿಸಿ ದೇವರಿಗೆ ಪೂಜಾದಿ ಧಾರ್ಮಿಕ ಸೇವಾ ಕೈಂಕರ್ಯಗಳನ್ನು ಸಲ್ಲಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಆಡು, ಕುರಿ, ಕೋಳಿ ಮುಂತಾದ ಪ್ರಾಣಿಗಳ ಬಲಿ ನೀಡಲಿದ್ದು, ಇದು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಭಂದಕ ಅಧಿನಿಯಮ 1959 ಮತ್ತು ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಾಣಿಬಲಿಯನ್ನು ಮೇಲ್ಕಂಡ ಕಾನೂನು ಹಾಗೂ ಹೈ ಕೋರ್ಟ್ ಆದೇಶಗಳ ಅಡಿಯಲ್ಲಿ ಸಂಪೂರ್ಣವಾಗಿ ತಡೆಗಟ್ಟಬೇಕು ಹಾಗೂ ಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ಬಾರದಂತೆ ಕಟ್ಟೆಚ್ಚರ ವಹಿಸಬೇಕೆಂದು ಕರ್ನಾಟಕ ಸರ್ಕಾರ, ಮೈಸೂರು ಜಿಲ್ಲಾಡಳಿತ ಮತ್ತು ಕೆಆರ್ ನಗರ ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಶಿವರಾತ್ರಿಯಿಂದ ಇಲ್ಲಿಯವರೆಗೂ ಮೈಸೂರು ಜಿಲ್ಲಾಡಳಿತ, ಕೆಆರ್ ನಗರ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯು ಕಪ್ಪಡಿ ಜಾತ್ರೆಯಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಿಬಲಿ ನಡೆಯದಂತೆ ವ್ಯಾಪಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸರ ಕಾರ್ಯ ವೈಖರಿ ತುಂಬಾ ಶ್ಲಾಘನೀಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜನತೆಯಲ್ಲಿ ಜಾಗೃತಿ ಮೂಡಿಸಲು ಇಂದಿನಿಂದ ಜಾತ್ರೆ ಮುಗಿಯುವವರೆಗೆ ಜಿಲ್ಲೆಯ ಕೆಆರ್ ನಗರ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಕಪ್ಪಡಿಯ ಶ್ರೀ ರಾಚಪ್ಪಾಜಿ ಜಾತ್ರಾ ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಸ್ವಾಮೀಜಿಯವರು ಅಹಿಂಸಾ-ಪ್ರಾಣಿದಯಾ-ಆದ್ಯಾತ್ಮ ಸಂದೇಶಯಾತ್ರೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು.





