ಮೈಸೂರು: ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸುವ ಸಂವಿಧಾನ ನೀಡಿದ ಡಾ.ಬಿಆರ್ ಅಂಬೇಡ್ಕರ್ ಅವರ ಆಶಯ ಇಂದಿಗೂ ಈಡೇರೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಶ್ವಮೈತ್ರಿ ಬುದ್ಧವಿಹಾರದ ಡಾ.ಕಲ್ಯಾಣಸಿರಿ ಬಂತೇಜಿ ಬೇಸರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಪ್ರಯುಕ್ತ ಟೌನ್ ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭೌತಿಕವಾಗಿ ಕಳೆದುಕೊಂಡ ಈ ಮಹಾ ಪರಿನಿರ್ವಾಣ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿವಿಧ ಭಾಷೆ, ಜನಾಂಗ ಹಾಗೂ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಭಾರತದ ನೆಲಕ್ಕೆ ಅಲ್ಲಿನ ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಆದರ್ಶ ಹಾಗೂ ವ್ಯಕ್ತಿತ್ವ ಎಂದಿಗೂ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.
ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಬೆಲೆಕೊಡಬೇಕು. ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ. ನಗರದ ಜೀವನಕ್ಕೆ ಒಗ್ಗಿಕೊಂಡ ಮಾನವ, ಸಾಮಾಜಿಕ ವ್ಯವಸ್ಥೆ ಸುಧಾರಣೆ ಕಂಡಿದ್ದರೂ ಸಹ ಜಾತಿ ಮಾನಸಿಕ ವ್ಯವಸ್ಥೆಯಿಂದ ಸುಧಾರಣೆ ಗೊಂಡಿಲ್ಲ. ಜಾತಿ ತಾರತಮ್ಯ ಹೋಗಿ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮಗೆ ನಿಜವಾದ ಸ್ವತಂತ್ರ ಸಿಗುವುದು. ಭ್ರಾತೃತ್ವದ ಭಾವನೆಯಿಂದ ಬದುಕಬೇಕಾದ ಸಮಾಜದಲ್ಲಿ ಜಾತಿ ಕೌರ್ಯ ಮೆರೆದು, ಮೇಲು-ಕೀಳೆಂಬ ಭಾವನೆಯನ್ನು ಜನರಲ್ಲಿ ಬಿತ್ತುತ್ತಿರುವುದು ನೋವಿನ ಸಂಗತಿ ಎಂದು ಬೇಸರಿಸಿದರು.
ಎಂತಹ ಸಂದರ್ಭದಲ್ಲಿಯೂ ಸಜ್ಜನರ ಸಂಘವನ್ನು ಮಾಡಬೇಕು. ಇಲ್ಲವಾದರೆ ಒಬ್ಬಂಟಿಯಾಗಿ ಒಳ್ಳೆಯ ಮನಸ್ಸಿನಿಂದ ಜೀವನ ನಡೆಸಬೇಕು. ಕೆಟ್ಟ ಮನಸ್ಸಿನಿಂದ ಉಂಟಾಗುವ ಸಮಸ್ಯೆ ಯಾವುದೇ ಬೇರೊಬ್ಬರ ವ್ಯಕ್ತಿಯಿಂದ ಆಗುವುದಿಲ್ಲ. ಈ ಅಂಶಗಳನ್ನು ಪರಿಪಾಲನೆ ಮಾಡುವವರು ಸಂಘರ್ಷದ ಜೀವನದಿಂದ ಸಂತೋಷದ ಜೀವನದೆಡೆ ನಡೆಯುತ್ತಾರೆ ಎಂದರು.
ದೇಶದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಇನ್ನೂ ಸ್ವತಂತ್ರ ಪಡೆದಿಲ್ಲ. ಭಾರತೀಯರೆಲ್ಲರೂ ಸಹೋದರತೆಯಿಂದ ಬದುಕಬೇಕು ಮಾತ್ರ ಇದು ಸಾಧ್ಯ. ಯಾವುದೇ ವ್ಯಕ್ತಿಯನ್ನು ಜಾತಿ -ಧರ್ಮ ಹಾಗೂ ವರ್ಣದಿಂದ ಅಳೆಯದೆ. ಪ್ರೀತಿಯಿಂದ ಭ್ರಾತೃತ್ವ ಭಾವನೆಯಿಂದ ಕಾಣಬೇಕೆಂಬುದು ಅಂಬೇಡ್ಕರ್ ಅವರ ಆಶಯ. ಇಂದಿಗೂ ಪ್ರಪಂಚದಾದ್ಯಂತ ಸುಭಧ್ರವಾಗಿ ನಿಂತಿರುವ ಅವರ ಪರಿಪೂರ್ಣವಾದ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಬುದ್ಧ ಎಂಬ ಸುಜ್ಞಾನ ಸಾಗರಕ್ಕೆ ಮಹಾ ನದಿಯಾಗಿರುವುದು ಬಾಬಾ ಸಾಹೇಬರು, ಅವರೊಂದಿಗೆ ನಾವು ಉಪ ನದಿಗಳಾಗಿ ಸೇರಿ, ಪ್ರಬುದ್ಧ ಸಂವಿಧಾನವನ್ನು ಅನುಸರಿಸೋಣ ಎಂದರು.
ಇದಕ್ಕು ಮುನ್ನ ಡಾ. ಕಲ್ಯಾಣ ಸಿರಿ ಬಂತೇಜಿ ಹಾಗೂ ಭೋದಿರತ್ನ ಬಂತೇಜಿ ಅವರು ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.