ಮೈಸೂರು : ಇತ್ತೀಚೆಗೆ ನಗರದ ಎಂಜಿ ರಸ್ತೆಯಲ್ಲಿ ಸಣ್ಣ ತರಕಾರಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಅವರ ಎಲ್ಲಾ ಮಳಿಗೆಗಳನ್ನು ತೆರವುಗೊಳಿಸಲಾಗಿತ್ತು. ಇದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿ ನಾವು ಹೇಗೆ ಜೀವನ ನಡೆಸುವುದು, ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ಗೋಳಾಡಿದ್ದರು.
ಈ ವಿಚಾರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಸಣ್ಣ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲೂ ಸವಿಸ್ತಾರವಾಗಿ ವ್ಯಾಪಾರಸ್ಥರ ಪರಿಸ್ಥಿತಿಯನ್ನ ಎಳೆ ಎಳೆಯಾಗಿ ಬಿಚ್ಚಿಡಲಾಗಿತ್ತು.
ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಅವರ ಮನವಿಗೆ ಸ್ಪಂದಿಸಿ ಸ್ಥಳಾಂತರಗೊಂಡಿದ್ದ 21 ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ನಿಶ್ಚಯಿಸಲಾಗಿದೆ. ಹೀಗಾಗಿ ಮಾಧ್ಯಮದವರು ಮತ್ತು ಅಧಿಕಾರಿಗಳಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಧನ್ಯವಾದ ತಿಳಿಸಿದ್ದಾರೆ.