ಮೈಸೂರು: ಚಲನಚಿತ್ರ ನಟ ದರ್ಶನ್ ಚಿಕಿತ್ಸೆ ಮುಗಿದ ಬಳಿಕ ಮತ್ತೆ ಜೈಲಿಗೆ ಹೋಗಬೇಕು. ದರ್ಶನ್‌ಗೆ ಜಾಮೀನು ಕೊಡಬಾರದು ಎಂದು ಸುಪ್ರೀಂಕೋರ್ಟ್ ಅರ್ಜಿ ಹಾಕುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಆರೋಪ ಸಂಬಂಧ ದರ್ಶನ್ ಕೇಸ್ ಇನ್ನೂ ವಿಚಾರಣೆ ನಡೆಯುತ್ತಿದೆ. ಜಾಮೀನು ಕೋರಿ ದರ್ಶನ್ ಮತ್ತೆ ಅರ್ಜಿ ಸಲ್ಲಿಸಬಹುದು. ಆದರೆ ಜಾಮೀನು ಕೊಡಬಾರದು ಎಂದು ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ ಎಂದರು.
ಸಂಪುಟ ಪುನರ್ ರಚನೆ ಬಗ್ಗೆ ಗೊತ್ತಿಲ್ಲ
ಸಂಪುಟ ಪುನರ್ ರಚನೆ ಸಿಎಂ ವಿವೇಚನೆಗೆ ಬಿಟ್ಟದ್ದು. ಸಚಿವರ ಬದಲಾವಣೆ ವಿಚಾರವೂ ತಿಳಿದಿಲ್ಲ. ಅದೆಲ್ಲವೂ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ಸಚಿವ ಜಮೀರ್ ಅಹಮದ್ ಖಾನ್ ಬದಲಾವಣೆ ವಿಚಾರವು ಗೊತ್ತಿಲ್ಲ. ಸಿಎಂ ದೆಹಲಿಗೆ ತೆರಳಿರುವುದು ಇಲಾಖೆಯ ಕಾರ್ಯಕ್ರಮಕ್ಕೇ ಹೊರತು ಬೇರೆ ಉದ್ದೇಶಕ್ಕಲ್ಲ ಎಂದು ಪ್ರತಿಕ್ರಿಯಿಸಿದರು.





